ಹುಣಸೂರು: ಹಲವಾರು ತಿಂಗಳಿಂದ ಆತಂಕ ಹುಟ್ಟಿಸಿದ್ದ ಹುಲಿಯು ತೋಟದಲ್ಲಿ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ. ಹನಗೋಡಿಗೆ ಸಮೀಪದ ಬೀರತಮ್ಮನಹಳ್ಳಿ ಅರಣ್ಯದಂಚಿನ ಗಾಣದಕಟ್ಟೆ ಕಾಲೋನಿ ಬಳಿಯ ಸಿದ್ದೇಗೌಡರ ತಾಳೆ ತೋಟದಲ್ಲಿ ತಿಂಗಳ ಹಿಂದೆ ಇಟ್ಟಿದ್ದ ಬೋನಿಗೆ ಸುಮಾರು 6-7ವರ್ಷದ ಗಂಡು ಹುಲಿ ಸೆರೆ ಸಿಕ್ಕಿದ್ದು, ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ಹುಲಿ ಸೆರೆಗೆ ಬೋನ್ :
ಕಳೆದ ಐದಾರು ತಿಂಗಳಿಂದ ಹನಗೋಡು ಸೇರಿದಂತೆ ಸಮೀಪದ ಹೆಮ್ಮಿಗೆ, ಹೆಮ್ಮಿಗೆಕಾಲೋನಿ, ಸುತ್ತಮುತ್ತಲ ಗ್ರಾಮಗಳಲ್ಲಿ ಹುಲಿ ಆಗಾಗ್ಗೆ ಕಾಣಿಸಿಕೊಂಡು ಹತ್ತಾರು ಜಾನುವಾರುಗಳನ್ನು ಬಲಿ ಪಡೆದಿತ್ತು. ತಿಂಗಳ ಹಿಂದೆ ಸಿದ್ದೇಗೌಡರ ಅರಣ್ಯದಂಚಿನ ತೋಟದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯು ಕರುವಿನ ಮೇಲೆ ದಾಳಿ ನಡೆಸಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದ್ದರೂ ಪತ್ತೆಯಾಗದ ಹುಲಿ ಸೆರೆಗಾಗಿ ಸಿದ್ದೇಗೌಡರ ತಾಳೆತೋಟದಲ್ಲಿ ದೊಡ್ಡ ಬೋನ್ ಇರಿಸಿದ್ದರು.
ಸಿದ್ದೇಗೌಡರ ಕುಟುಂಬದವರು ನಿತ್ಯ ಸಂಜೆ ಬೋನ್‍ನಲ್ಲಿ ಕರುವನ್ನು ಕಟ್ಟಿಹಾಕಿ ಬೆಳಿಗ್ಗೆ ಮನೆÀಗೆ ಕರೆ ತರುತ್ತಿದ್ದರು. ಎಂದಿನಂತೆ ಮಂಗಳವಾರ ಬೆಳಿಗ್ಗೆ ಸಿದ್ದೇಗೌಡರ ಕುಟುಂಬದ ಮಂದಿ ಮನೆಗೆ ಕರು ಕರೆ ತರಲು ಹೋಗುತ್ತಿದ್ದಂತೆ ಹುಲಿಯ ಘರ್ಜನೆ ಕೇಳಿಸಿದೆ. ಬೋನಿನಲ್ಲಿ ಹುಲಿ ಬಂದಿಯಾಗಿರುವುದನ್ನು ಕಂಡು ಅರಣ್ಯಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಕಂಟಕವಾಗಿದ್ದ ಈ ಹುಲಿ ಸೆರೆ ಹಿಡಿಯಲು ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತು. ಸೆರೆಯಾದ ಹುಲಿಗೆ ಐಡಿ ಸಹ ಮಾಡಲಾಗಿತ್ತು. ಸಾಕಷ್ಟು ಬಾರಿ ಕೂಂಬಿಂಗ್ ನಡೆಸಿದ್ದರೂ ಹುಲಿ ಒಮ್ಮೆ ಮಾತ್ರ ಥರ್ಮಲ್ ಡ್ರೋಣ್‍ನಲ್ಲಿ ಕಾಣಿಸಿಕೊಂಡಿತ್ತು. ತಿಂಗಳ ಹಿಂದೆ ಸೆರೆ ಹಿಡಿಯಲು ಸಿದ್ದೇಗೌಡರ ಜಮೀನಿನಲ್ಲಿ ಬೋನ್ ಇಡಲಾಗಿತ್ತು. ಸೆರೆ ಸಿಕ್ಕಿರುವ ಹುಲಿಯು ಗಾಬರಿಯಾಗಿ ಗಾಯ ಮಾಡಿಕೊಂಡಿದೆ. ಚಿಕಿತ್ಸೆ ನೀಡಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಬನ್ನೇರುಘಟ್ಟ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.
* ಎಸಿಎಫ್ ಲಕ್ಷ್ಮಿಕಾಂತ್
ಬನ್ನೇರುಘಟ್ಟಕ್ಕೆ ಸ್ಥಳಾಂತರ
ವಿಷದಯ ತಿಳಿದು ಸ್ಥಳಕ್ಕೆ ಎಸಿಎಫ್ ಲಕ್ಷ್ಮಿಕಾಂತ್, ಆರ್‍ಎಫ್‍ಓಗಳಾದ ಸುಬ್ರಹ್ಮಣ್ಯ, ನಂದಕುಮಾರ್ ಸೇರಿದಂತೆ ಸಿಬ್ಬಂದಿ ದೌಡಾಯಿಸಿ ಜನರನ್ನು ನಿಯಂತ್ರಿಸಿದರು. ಮೈಸೂರು ಸರ್ಕಲ್‍ನ ಪಶುವೈದ್ಯ ಡಾ.ಆದರ್ಶ್ ಬೋನಿನಲ್ಲಿದ್ದ ಹುಲಿಯ ಜ್ಞಾನ ತಪ್ಪಿಸಿದರು. ಬೋನಿನ ಸರಳಿಗೆ ಸಿಲುಕಿ ಹಲ್ಲಿಗೆ ಪೆಟ್ಟು ಮಾಡಿಕೊಂಡಿದ್ದ ಹುಲಿಗೆ ಚಿಕಿತ್ಸೆ ನೀಡಿದ ನಂತರ ಇಲಾಖೆ ವಾಹನದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸಲಾಯಿತು. ಹುಲಿ ಸೆರೆಯ ಬಗ್ಗೆ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಹುಲಿ ನೋಡಲು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಗ್ರಾಮಸ್ಥರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸಪಟ್ಟರು..
ರಾತ್ರಿಯಿಡಿ ಹುಲಿ ಪಕ್ಕದಲ್ಲೇ ಇದ್ದ ಕರು ಬೆದರಿದ್ದು, ತೀವ್ರ ಅಸ್ವಸ್ಥಗೊಂಡಿದೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಹುಲಿಯನ್ನು ಬನ್ನೇರುಘಟ್ಟ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ. ಹುಲಿ ಸೆರೆಯಿಂದ ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.


