Online News in ಕನ್ನಡ

ದಕ್ಷಿಣಕಾಶಿಯಲ್ಲಿ ಹೆಚ್ಚಿದ ಅಪರಾಧ ಪ್ರಕರಣ: ಶಾಸಕ ದರ್ಶನ್‌ರಿಂದ ಪೊಲೀಸ್‌ ಅಧಿಕಾರಿಗಳ ಸಭೆ

ನಂಜನಗೂಡು : ನಗರದಲ್ಲಿ ಹೆಚ್ಚುತ್ತಿರುವ ಸರಣಿ ಕಳ್ಳತನ, ದರೋಡೆ, ಕೊಲೆ, ಸುಲಿಗೆಗಳಂತಹ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರು ಭಯಗ್ರಸ್ತರಾಗಿದ್ದಾರೆ, ಆದ್ದರಿಂದ ಪೊಲೀಸ್ ಅಧಿಕಾರಿಗಳು ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಪೋಲಿಸ್ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದರು.
ನಗರದಲ್ಲಿ ಅಕ್ರಮ ಮದ್ಯಮಾರಾಟ, ಗಾಂಜಾ, ಡ್ರಗ್ಸ್ ಸರಬರಾಜು ನಡೆಯುತ್ತಿರುವ ಸಮಾಜ ಘಾತುಕ ವ್ಯಕ್ತಿಗಳೊಂದಿಗೆ ಸ್ಥಳೀಯ ಪೊಲೀಸರು ಕೈಜೋಡಿಸಿದ್ದಾರೆ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ, ನಗರದಲ್ಲಿ ಸರಣಿ ಕಳ್ಳತನ ನಡೆಯುತ್ತಿದ್ದರೂ ಯಾವುದೇ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿಲ್ಲ, ನಾಗರೀಕರು ತಮ್ಮ ರಕ್ಷಣೆಯ ಬಗ್ಗೆ ಚಿಂತಿಸಬೇಕಾದ ಪರಿಸ್ಥಿತಿ ಇದೆ, ನಗರ ಪೊಲೀಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ, ರಾತ್ರಿ ಗಸ್ತು ಹೆಚ್ಚಿಸಿ, ಅಗತ್ಯ ಕ್ರಮವಹಿಸಬೇಕು, ನಂಜನಗೂಡು ತಾಲೂಕು ಮುಖ್ಯಮಂತ್ರಿಗಳ ಸ್ವ ಕ್ಷೇತ್ರಕ್ಕೂ ಒಳಪಡುವ ಕಾರಣ. ಇನ್ನು ಮುಂದೆ ಯಾವುದೇ ಅಪರಾಧ ಪ್ರಕರಣಗಳು ನಡೆಯದಂತೆ ಎಚ್ಚರಿಕೆವಹಿಸಿ ಕೆಲಸ ನಿರ್ವಹಿಸಬೇಕು, ಅಲ್ಲದೆ ಅಪರಾಧ ಪ್ರಕರಣಗಳಲ್ಲಿ ತೊಡಗಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಬೇಕು, ಇಲ್ಲವಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗೃಹ ಸಚಿವರ ಜೊತೆಗೆ ಚರ್ಚಿಸಿ ಪೋಲಿಸ್ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗುವುದು ಎಂದು ತಾಕೀತು ಮಾಡಿದರು .
ಸಭೆಯಲ್ಲಿ ಮಾತನಾಡಿದ ನಾಗರೀಕರು ರಾತ್ರಿ ಗಸ್ತು ಹೆಚ್ಚಿಸಲು ಪೊಲೀಸ್ ಸಿಬ್ಬಂದಿಗಳ ಕೊರತೆಯಿದ್ದರೆ ನಗರದ ನೂರಕ್ಕು ಹೆಚ್ಚು ಯುವಕರು ಪೊಲೀಸಿನವರೊಂದಿಗೆ ತಂಡ ಕಟ್ಟಿಕೊಂಡು ರಾತ್ರಿ ಗಸ್ತು ತಿರುಗಲು ಸಿದ್ದರಿದ್ದಾರೆ, ಯವಕರನ್ನು ಬಳಸಿಕೊಳ್ಳಿ, ನಗರದ ಇತಿಹಾಸದಲ್ಲಿ ಈ ರೀತಿ ಸರಣಿ ಕಳ್ಳತನ ನಡೆದಿರಲಿಲ್ಲ, ಕಳ್ಳರನ್ನು ಪತ್ತೆ ಹಚ್ಚಿ, ರಕ್ಷಣೆ ನೀಡಿ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಮಾತನಾಡಿ ಸರಣಿ ಕಳ್ಳತನ ಪ್ರಕರಣಗಳ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ, ಸ್ಥಳೀಯ ಶಾಸಕರು ಸಹ ಸಭೆ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವಂತೆ ತಿಳಿಸಿದ್ದರಿಂದಾಗಿ ತಾಲೂಕು ಕಚೇರಿಯಲ್ಲಿ ಸಭೆ ನಡೆಸಿ ಕಳೆದ ಕೆಲ ವರ್ಷಗಳ ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ಪರಿಶೀಲಿಸಲಾಗಿದೆ, ಕಳೆದ ಎರಡು ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಆದರೂ ಸಹ ನಂಜನಗೂಡಿನಲ್ಲಿ ಎರಡು ತಿಂಗಳಿಂದ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿದೆ, ಕೆಲ ಪ್ರಕರಣಗಳಲ್ಲಿ ಪೊಲೀಸರು ಸಹ ಸಾತ್ ನೀಡುತ್ತಿದ್ದಾರೆ ಎಂಬ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿದೆ, ಆದ್ದರಿಂದ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ. ನಗರ ಪೊಲೀಸ್ ಠಾಣೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಿ ರಾತ್ರಿ ಗಸ್ತು ಹೆಚ್ಚಿಸಲಾಗುವುದು, ಅಲ್ಲದೆ ನಗರ ಪ್ರದೇಶದಲ್ಲಿ ನಾಕಬಂದಿ ರಚಿಸಿ ವಾಹನಗಳ ತಪಾಸಣೆ ನಡೆಸಿ ನಿಗಾ ವಹಿಸಲಾಗುವುದು, ಅಲ್ಲದೆ ಕೆಲವೆಡೆ ಸಿಸಿಟಿವಿ ಅಳವಡಿಸಲು ಕ್ರಮವಹಿಸಲಾಗುವುದು, ಪೊಲೀಸರ ವಿರುದ್ದ ಕೇಳಿ ಬಂದಿರುವ ದೂರಗಳ ಬಗ್ಗೆ ವಿಚಾರಣೆ ನಡೆಸಲಾಗುವುದು, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಎ.ಎಸ್.ಪಿ.ಮಲ್ಲಿಕ್, ಡಿವೈ ಎಸ್ ಪಿ ರಘು, ಸಿಪಿಐ ಗಳಾದ ಸಿ.ಎಂ.ರವೀಂದ್ರ, ಚಂದ್ರಶೇಖರ್, ಪಿಎಸ್ ಐ ಗಳಾದ ಕೃಷ್ಣಕಾಂತ್ ಕೋಳಿ, ಚೇತನ್ ಕುಮಾರ್ ಉಪಸ್ಥಿತರಿದ್ದರು.
ನಂಜನಗೂಡಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಶಾಸಕ ದರ್ಶನ್ ಧ್ರುವನಾರಾಯಣ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.

Call Now Button