ಮೈಸೂರು: ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಜನ್ಮ ದಿನವನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಣ್ಣ ನೀರಾವರಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಬೋಸರಾಜು ಇಂದು ಭಾರತದ ಹೆಗ್ಗುರುತು ಇಂದಿರಾ ಗಾಂಧಿಯವರನ್ನು ಭದ್ರತೆಯಲ್ಲಿದ್ದ ಪೊಲೀಸ್ ಅಧಿಕಾರಿಗಳೇ ಹತ್ಯೆಗೈದ ದಿನ, ಆದರೆ ಭಾರತದ ಮಹಿಳಾ ರಾಜಕಾರಣದ ಅಧಿಪತ್ಯಕ್ಕೆ ಅಡಿಗಲ್ಲು ಇಟ್ಟಿದ್ದು ಇಂದಿರಾಗಾಂಧಿ ಎಂಬುದನ್ನು ಈ ಜಗತ್ತು ಮರೆಯಲು ಸಾಧ್ಯವಿಲ್ಲ. ಅಂದು ಮಹಿಳಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ಭದ್ರತೆಗೆ ದೊಡ್ಡ ಸವಾಲುಗಳು ಇದ್ದ ಸಂದರ್ಭದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿ ಕಾಂಗ್ರೆಸ್ ಪಕ್ಷ ಹಾಗು ಈ ದೇಶವನ್ನು ಮುನ್ನಡೆಸಿದ ರೀತಿ ಒಂದು ದೊಡ್ಡ ಮೈಲಿಗಲ್ಲು. ಈ ದೇಶದ ಮಟ್ಟಿಗೆ ಇದೊಂದು ಕರಾಳ ದಿನ ಎಂದು ಹೇಳಿದರು.
ಭಾರತದ ಬಡವರನ್ನು ತನ್ನ ಬಡತನ ಎಂದು ಭಾವಿಸಿ, ಭಾರತದ ಸಮಸ್ಯೆಗಳನ್ನು ತನ್ನ ಸಮಸ್ಯೆ ಎಂದು ಭಾವಿಸಿದ ಧೀಮಂತ ಮಹಿಳೆ ಇಂದಿರಾ ಗಾಂಧಿ ಎಂದು ಹೇಳಿ ಕನಿಷ್ಠ ಒಂದು ಅಡಿಯೂ ಭೂಮಿ ಇರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಉಳುವವನೇ ಭೂಮಿಯ ಒಡೆಯ ಕಾನೂನನ್ನು ಜಾರಿಗೆ ತಂದು ಭೂಮಿ ನೀಡಿದ ಹೆಗ್ಗಳಿಕೆ ಇಂದಿರಾ ಅವರಿಗೆ ಮಾತ್ರ ಸಲ್ಲುತ್ತದೆ ಎಂದರು. ಭಾರತದ ಸಾಮಾಜಿಕ ಸ್ಥಿತಿಗತಿಗಳನ್ನು ಹತ್ತಿರದಿಂದ ಬಲ್ಲವರಾಗಿದ್ದ ಇಂದಿರಾ ಗಾಂಧಿಯವರು ಹೆಣ್ಣು ಮಕ್ಕಳ ಬದುಕಿನ ಸವಾಲುಗಳನ್ನು ಮೆಟ್ಟಿ ನಿಂತು ಇಡಿ ಪ್ರಪಂಚವೇ ತಿರುಗಿ ನೋಡುವ ಹಾಗೆ ದೇಶವನ್ನು ಕಟ್ಟಿದರ ಫಲವಾಗಿ ಇಂದು ಸುಭದ್ರ ಭಾರತ ನಮ್ಮೊಂದಿಗಿದೆ ಎಂದು ಹೇಳಿ ಇಂದಿರಾ ಗಾಂಧಿಯವರ ಯೋಜನೆ ಮತ್ತು ಕಾರ್ಯಗಳನ್ನು ಕರ್ನಾಟಕದಲ್ಲಿ ಇಂದು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಮುಕ್ತ ಕಂಠದಿಂದ ಹೊಗಳಿದರು.
ಮೈಸೂರಿನ ತುಳಸಿ ದಾಸಪ್ಪನವರ ಮಡದಿ ಸರೋಜ ತುಳಸಿ ದಾಸಪ್ಪ ಮಾತನಾಡಿ, ಇಂದಿರಾ ಗಾಂಧಿಯವರು ಮೈಸೂರಿಗೆ ಭೇಟಿ ಕೊಟ್ಟಾಗ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಆಗ ನಾನು ಇಂದಿರಾ ಗಾಂಧಿಯವರ ಜೊತೆ ಒಡನಾಟವನ್ನು ಹೊಂದಿದ್ದೆ ಎಂಬ ಐತಿಹಾಸಿಕ ಘಟನೆಗಳನ್ನು ನೆನೆದುಕೊಂಡರು. ತುಳಸಿ ದಾಸಪ್ಪನವರನ್ನು ಇಂದಿರಾ ಗಾಂಧಿಯವರು ಪ್ರೀತಿಯಿಂದ ತುಳಸಿ ಎಂದು ಕರೆಯುತ್ತಿದ್ದರು, ಎಂದು ಹೇಳಿ ನೆಹರು ಅವರು ತೀರಿಹೋದಾಗ ನಾನು ಮತ್ತು ಯಶೋಧರ ದಾಸಪ್ಪ ಅವರ ಅಂತಿಮ ದರ್ಶನಕ್ಕೆ ಹೋಗಿದ್ದೆವು ಎಂದುರು. ಕಾಂಗ್ರೆಸ್ ಎರಡು ಭಾಗ ಆದಾಗ ಇಂದಿರಾ ಗಾಂಧಿಯನ್ನು ಕರೆಸಿ ಯಶೋಧರ ದಾಸಪ್ಪ ಸಭೆ ಮಾಡಿಸಿದರು. ಆ ಸಭೆಯಲ್ಲಿ ಒಮ್ಮತ ಮೂಡದೆ ಎರಡು ಭಾಗವಾಯಿತು ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್. ಮೂರ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಜೆ. ವಿಜಯ್ ಕುಮಾರ್, ಮೈಸೂರು ಲ್ಯಾಕ್ ಅಂಡ್ ಪೇಂಟ್ ಅಧ್ಯಕ್ಷರಾದ ಎಚ್ ಡಿ ಗಣೇಶ್, ಮಾಜಿ ಮೇಯರ್ ಗಳಾದ ಮೋದಮಣಿ ಪ್ರಕಾಶ್, ಪುಷ್ಪಲತಾ ಚಿಕ್ಕಣ್ಣ, ಚಿಕ್ಕಣ್ಣ, ಪಕ್ಷದ ವಿವಿಧ ಹಂತದ ಪದಾಧಿಕಾರಿಗಳಾದ ತಲಕಾಡು ಮಂಜುನಾಥ್, ಈಶ್ವರ್ ಚಕಡಿ, ಶಿವಪ್ರಸಾದ್, ಸುನಂದ್ ಕುಮಾರ್, ಭಾಸ್ಕರ್ ಗೌಡ, ಮಂಚೇಗೌಡನ ಕೊಪ್ಪಲು ರವಿ, ಎಸ್ ಸಿದ್ದಯ್ಯ, ಶಾಮ. ರಾಹುಲ್ ಕುಂಬರಹಳ್ಳಿ, ಮಹೇಶ್, ಯೋಗೇಶ್, ಗಿರೀಶ್ , ಶ್ರೀಮತಿ ಭವ್ಯ, ಶ್ರೀಮತಿ ಪುಷ್ಪವಲ್ಲಿ, ಎನ್ ಡಿ ತಿವಾರಿ, ಶ್ರೀಮತಿ ಸುಶೀಲ ನಂಜಪ್ಪ, ದಾಸನೂರು ಪುಟ್ಟಸ್ವಾಮಿ, ಗುರು ಹಾಗೂ ಇತರ ಪ್ರಮುಖರು ಭಾಗವಹಿಸಿದ್ದರು.


