Online News in ಕನ್ನಡ

ಒಳಮೀಸಲಾತಿ ವಂಚನೆ: ಮಾರ್ಚ್‌ 25ಕ್ಕೆ ಬೆಂಗಳೂರಿನಲ್ಲಿ ಬಲಗೈ ಬೃಹತ್‌ ಪ್ರತಿಭಟನೆ

ಅವೈಜ್ಞಾನಿಕ ನಾಗಮೋಹನ್‌ ದಾಸ್‌ ವರದಿ ಸಂಪೂರ್ಣ‌ ತಿರಸ್ಕಾರಕ್ಕೆ ಒತ್ತಾಯ
ಮೈಸೂರು: ಜಸ್ಟೀಸ್‌ ನಾಗಮೋಹನ್ ದಾಸ್‌ ಆಯೋಗದ ವರದಿಯು ಸುಪ್ರೀಂಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದ್ದು, ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಆಗ್ರಹಿಸಿ ಹಾಗೂ ಒಳ ಮೀಸಲಾತಿ ಅನುಷ್ಠಾನದಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಜನಜಾಗೃತಿ ಮೂಡಿಸಲು ಮಾರ್ಚ್‌ 25ರಂದು ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶವನ್ನು ಹಮ್ಮಿಕೊಂಡಿರುವುದಾಗಿ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸಮಾವೇಶಕ್ಕೆ ಪೂರಕವಾಗಿ ಮಾರ್ಚ್‌ 23ರಂದು ಮೈಸೂರು ನಗರದಲ್ಲಿ ಬಲ್ಲಾಳ ವೃತ್ತದಿಂದ ಹೊಸ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್‌ ಅರಿವು ಜಾಥಾವನ್ನು ಆಯೋಜಿಸಲಾಗಿದೆ. ಆಮೂಲಕ ಬಲಗೈ ಸಮುದಾಯದ ಅಸ್ಮತೆ ಮತ್ತು ಅಸ್ಥಿತ್ವವನ್ನು ಜಾಗೃತಿಗೊಳಿಸಲಾಗುವುದು ಎಂದರು.
ಸುಪ್ರೀಂಕೋರ್ಟ್‌ ಆದೇಶದನ್ವಯ ಸಮಾನ ಜಾತಿಗಳನ್ನು ಒಂದುಗೂಡಿಸಬೇಕಾಗಿದ್ದ ಜಸ್ಟೀಸ್‌ ನಾಗಮೋಹನ ದಾಸ್‌, ಸಮಾನ ಜಾತಿಗಳನ್ನೇ ಒಡೆದು ಸುಪ್ರೀಂಕೋರ್ಟ್‌ ಆದೇಶವನ್ನು ಉಲ್ಲಂಘಿಸಿದ್ದಾರೆ. ಇನ್ನು ರಾಜ್ಯ ಸರಕಾರಕ್ಕೆ ಶೇ.56ರಷ್ಟು ಮೀಸಲಾತಿ ಜಾರಿ ಮಾಡಲು ಅವಕಾಶವೇ ಇಲ್ಲ. ಇದು ಕೇಂದ್ರದ ಕ್ಯಾಬಿನೆಟ್‌ನಲ್ಲಿ ತೀರ್ಮಾನವಾಗಿ ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸಬೇಕು. ಹಾಗೂ ಒಳ ಮೀಸಲಾತಿ ವಿಷಯದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಉಳಿಸಿದೆ. ಇಷ್ಟೆಲ್ಲ ಗೊಂದಲಗಳಿದ್ದರೂ ಒಳ ಮೀಸಲಾತಿ ಜಾರಿ ಆಗಬೇಕು ಎನ್ನುವ ಕೆಲವೇ ಕೆಲ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕೆ ಎಡ-ಬಲವನ್ನು ಎತ್ತಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ಎಡ-ಬಲ ಒಗಟ್ಟು ಮುರಿದರೆ ನಾಶ ಎಂದು ಹೇಳಿದ್ದಾರೆ. ಇದನ್ನೇ ಮುಂದುವರೆದ ಸಮಾಜಗಳು ಮುಂದಿಟ್ಟುಕೊಂಡು ಎಡ ಬಲವನ್ನು ಒಡೆದು ಅವುಗಳಿಗೆ ರಾಜಕೀಯ ಸ್ಥಾನಮಾನ ದೊರಕದಂತೆ ಮಾಡಬೇಕೆಂದು ಪಿತೂರಿ ನಡೆಸುತ್ತಿದ್ದಾರೆ. ಇದಕ್ಕೆ ಎರಡೂ ಸಮಾಜಗಳು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಮಾರ್ಚ್‌ 25ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಲಗೈ ಜಾಗೃತಿ ಸಮಾವೇಶದಲ್ಲಿ ಬೀದರ್‌ನಿಂದ ಚಾಮರಾಜನಗರದ ವರೆಗೆ ಎಲ್ಲ ಬಲಗೈ ಸಮುದಾಯಗಳ ಮುಖಂಡರು ಸ್ವಯಂ ಪ್ರೇರೀತರಾಗಿ ಆಗಮಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು. ಬಲಗೈ ಸಚಿವರಿಂದ ರಾಜೀನಾಮೆ:
ಅವೈಜ್ಞಾನಿಕವಾಗಿರುವ ಒಳಮೀಸಲಾತಿಯನ್ನು ಜಾರಿಗೆ ತಂದು ಬಲಗೈ ಸಮುದಾಯಕ್ಕೆ ಅನ್ಯಾಯವಾದರೆ ಆ ಸಮುದಾಯದ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಲಗೈ ಸಮುದಾಯದಿಂದಲೇ ರಾಜಕೀಯ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಆ ಸಮುದಾಯಕ್ಕೆ ಅನ್ಯಾಯ ಮಾಡಬಾರದು. ಒಂದು ವೇಳೆ ಅನ್ಯಾಯವಾದರೆ ಮುಂದಿನ ದಿನಗಳಲ್ಲಿ ಈ ಸಮುದಾಯ ತಮಗೆ ತಕ್ಕಪಾಠ ಕಲಿಸಲಿದೆ ಎಂದು ಎಚ್ಚರರಿಸಿದರು.
ರಕ್ತಪಾತದ ಮಾತು ಬರಬಾರದು !
ಶತಶತಮಾನಗಳಿಂದ ಸಮಾನ ಶೋಷಣೆಗೆ ಒಳಗಾದ ಸಮುದಾಯಗಳನ್ನು ಒಳ ಮೀಸಲಾತಿಯ ನೆಪದಲ್ಲಿ ರಕ್ತಪಾತಕ್ಕೆ ಪ್ರಚೋದನೆ ನೀಡುತ್ತಿರುವುದು ಅವಿವೇಕತನದ್ದು, ನಾವು ಯಾರ ವಿರುದ್ಧ ರಕ್ತಪಾತದ ಹೋರಾಟ ಮಾಡಬೇಕೆಂಬ ಅರಿವೇ ವಕೀಲ ಅರುಣ್‌ಕುಮಾರ್‌ಗೆ ಇಲ್ಲ. ಒಬ್ಬ ವಕೀಲನಾಗಿ, ಕಪ್ಪು ಕೋಟು ಧರಿಸಿಕೊಂಡು ಕಾನೂನು ಬಾಹೀರ ಮಾತುಗಳನ್ನು ಆಡುವುದು ನ್ಯಾಯಸಮ್ಮತವಲ್ಲ ಎಂದು ತಿಳಿಸಿದರು. ‌ಸುದ್ದಿಗೋಷ್ಠಿಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಎನ್.ಭಾಸ್ಕರ್‌, ವಕೀಲ ತಿಮ್ಮಯ್ಯ, ಪತ್ರಕರ್ತ ಸೋಮಯ್ಯ ಮಲೆಯೂರು ಹಾಜರಿದ್ದರು.

Call Now Button