ಮೈಸೂರು: ಕಾಡಂಚಿನಲ್ಲಿ, ನಗರದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಳ್ಳುವುದು ಈಗ ಸುದ್ದಿಯಾಗಿ ಉಳಿದಿಲ್ಲ. ಪ್ರತಿ ದಿನ ಒಂದಲ್ಲಾ ಒಂದು ಚಿರತೆಗಳ ಸುದ್ದಿಗಳು ಪ್ರಕಟವಾಗುತ್ತಲೇ ಇದೆ. ಆದರೆ, ಈ ಸುದ್ದಿ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ. ಮೈಸೂರಿನ ಹೃದಯ ಭಾಗದ ಸಿದ್ಧಾರ್ಥನಗರದ ಮನೆಯೊಳಗೇ ಚಿರತೆ ಬಂದಿರುವುದು ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟುಹಾಕಿದೆ.

ವಿಚಿತ್ರವೆಂದರೆ, ಎರಡು ಗಂಟೆಗಳ ಕಾಲ ಮನೆ ಹೊಕ್ಕಿ ಕುಳಿತ ಚಿರತೆ ಮನೆಯವರಿಗೆ ಯಾವುದೇ ತೊಂದರೆ ಮಾಡಿಲ್ಲ. ಮಂಚದ ಮೇಲೆ ವಯಸ್ಸಾದ ವೃದ್ಧೆ ಮಲಗಿದ್ದರೆ, ಮಂಚದ ಕೆಳಗೆ ಚಿರತೆ ಮಲಗಿದೆ. ವೃದ್ಧೆಯೊಂದಿಗೆ ಮನೆಯಲ್ಲಿ ಅಳಿಯ ಸುರೇಶ್, ಮಗಳು, ಮನೆಗೆಸಲದ ಮಹಿಳೆ ಇದ್ದರು. ಸದ್ಯ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

ಹೌದು, ಮೈಸೂರು ನಗರದ ಸಿದ್ಧಾರ್ಥನಗರದ ಆಸುಪಾಸಿನಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆಯವರು ಸೂಚನೆ ನೀಡಿದ್ದಾರೆ. ಆ ಕಾರಣಕ್ಕಾಗಿ ಜನರು ಮನೆಯ ಬಾಗಿಲು ತೆಗೆಯದೆ ಒಳಗೇ ಇದ್ದರು. ಆದರೆ, ಸುರೇಶ್ ಎಂಬುವರು ಬೆಳಗ್ಗೆ 5 ರಿಂದ 10 ನಿಮಿಷ ಮನೆಯ ಮೇನ್ ಡೋರ್ ತೆಗೆದು ತಮ್ಮಸ್ಟಕ್ಕೆ ತಾವು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿರತೆ ಮನೆಯನ್ನು ಹೊಕ್ಕಿ ಮಂಚದ ಕೆಳಗೆ ಸೇರಿಕೊಂಡಿದೆ.
ಆದರೆ, ಮನೆಯೊಳಗೇ ಚಿರತೆ ಇರುವ ಸುಳಿವೇ ಇಲ್ಲದೆ ಮನೆ ಮಂದಿ ಎಂದಿನಂತೆ ಕೆಲಸ ಕಾರ್ಯ, ಊಪ ಉಪಚಾರದಲ್ಲಿ ತೊಡಗಿಕೊಂಡಿದ್ದಾರೆ. ಮನೆ ಕೆಲಸದ ಮಹಿಳೆ ಬಂದು ಸುರೇಶ್ ಅವರ ಅತ್ತೆ ವೃದ್ಧ ಮಹಿಳೆ ಶೈಲಜಾ ಅವರ ಕಾಲಿಗೆ ಔಷಧಿ ಹಚ್ಚಿ ಹೋಗಿದ್ದಾರೆ. ಆಗಲೂ ಚಿರತೆ ಸುಳಿವು ಸಿಕ್ಕಿಲ್ಲ. ಎರಡು ಗಂಟೆ ಕಳೆದ ಬಳಿಕ ಮಂಚದ ಕೆಳಗೆ ಚಿರತೆ ಇರುವುದನ್ನು ಗಮನಿಸಿ ತಕ್ಷಣ ವೃದ್ಧ ಮಹಿಳೆಯನ್ನು ಹೊರಗೆ ಎತ್ತಿಕೊಂಡು ಬಂದು ನಂತರ ರೂಂ ಬಾಗಿಲು ಹಾಕಿ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಮನೆಯಲ್ಲಿದ್ದು ಯಾರಿಗೂ ತೊಂದರೆ ಮಾಡದ ಚಿರತೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ಮತ್ತೊಂದೆಡೆ ಸಮಯ ಪ್ರಜ್ಞೆ ಮೆರೆದು ವೃದ್ಧೆ ಶೈಲತಾ ಅವರನ್ನು ರಕ್ಷಣೆ ಮಾಡಿದ ಸುಜಾತ ಅವರ ಧೈರ್ಯವನ್ನು ಮೆಚ್ಚಿದ್ದಾರೆ.


