ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಸ್ಥಲೀಯ ಸಂಸ್ಥೆ ಚುನಾವಣೆಗಳಲ್ಲಿ ಜಾತ್ಯಾತಿತ ಜನತಾದಳ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಸರ್ವೋಚ್ಛ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಕಟಿಸಿದ್ದಾರೆ. ಆಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸ್ಥಳೀಯ ಮಟ್ಟದಲ್ಲಿ ಮುರಿದುಬಿದ್ದಂತ್ತಾಗಿದೆ.
ಈ ಕುರಿತು ಸಭೆಯ ನಂತರ ಮಾತನಾಡಿದ ಹೆಚ್.ಡಿ.ದೇವೇಗೌಡ, ಬಿಜೆಪಿ ಒಳಗೊಂಡ ಎನ್‌ಡಿಎ ಜೊತೆಗಿನ ಮೈತ್ರಿ ಕೇವಲ ಲೋಕಸಭೆ ಮತ್ತು ವಿಧಾನಸಭೆಗೆ ಸೀಮಿತವಾಗಿದ್ದು ಮುಂಬರುವ ನಗರಪಾಲಿಕೆ, ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸೇರಿದಂತೆ ಎಲ್ಲ ಬಗ್ಗೆ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದರು.
ಅದು ಹಳೇ ಮೈಸೂರು ಭಾಗವಾಗಲಿ, ಬೆಂಗಳೂರು ಭಾಗವಾಗಲಿ, ಉತ್ತರ ಕರ್ನಾಟಕವಾಗಲಿ, ಮುಂಬೈ ಕರ್ನಾಟಕವಾಗಿರಲಿ. ಜೆಡಿಎಸ್ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಅಭ್ಯರ್ಥಿಯನ್ನು ಹಾಕಬೇಕೆಂಬುವುದು ಎಲ್ಲರ ಅಭಿಪ್ರಾಯವಾಗಿತ್ತು. ಕಾರ್ಯಕರ್ತರ ಭಾವನೆಗೆ ತಕ್ಕಂತೆ ನಾವು ಎಲ್ಲ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಅವರು ಜನಪ್ರಿಯ ನಾಯಕರಾಗಿದ್ದಾರೆ. ಅವರಿಗೆ ರಾಜ್ಯದ ಜನರ ಬೆಂಬಲ ಇದ್ದೇ ಇದೆ ಎಂದು ಹೇಳಿದರು.


