ಮೈಸೂರು: ʻನಮ್ಮ ತಂದೆಯೇ ಐದು ವರ್ಷ ಮುಖ್ಯಮಂತ್ರಿ, ಖುದ್ದು ಸಿಎಂ ಈ ವಿಷಯವನ್ನು ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ನಾನು ಎರಡೂವರೆ ವರ್ಷದಿಂದ ಇದನ್ನೇ ಹೇಳುತ್ತಿದ್ದೇನೆ. ಈಗಲೂ ಹೇಳುತ್ತಿದ್ದೇನೆ, ನನ್ನ ತಂದೆಯ ಮಾತೇ ನನ್ನ ಮಾತು ಕೂಡʼ ಹೀಗೆಂದು ಖಡಕ್ ಉತ್ತರ ನೀಡಿದವರು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ.
ಮೈಸೂರಿನಲ್ಲಿಂದು ತಂದೆ ಸಿಎಂ ಸಿದ್ದರಾಮಯ್ಯ ಪರ ಭರ್ಜರಿ ಬ್ಯಾಟಿಂಗ್ ಆಡಿದ ಪುತ್ರ ಡಾ. ಯತೀಂದ್ರ, ಶಾಸಕರು ದೆಹಲಿಗೆ ಹೋಗಿರುವುದಕ್ಕೂ ಸಿಎಂ ಸ್ಥಾನಕ್ಕೂ ಸಂಬಂಧವಿಲ್ಲ. ಉಪ ಚುನಾವಣೆ ಫಲಿತಾಂಶಕ್ಕೂ ಸಿಎಂ ಸ್ಥಾನಕ್ಕೂ ಸಂಬಂಧವಿಲ್ಲ. ಸರಕಾರ ಭದ್ರವಾಗಿದೆ, ಸಿಎಂ ಸ್ಥಾನವೂ ಭದ್ರವಾಗಿದೆ ಎಂದು ನುಡಿದರು.
ರಾಜ್ಯ ಸರಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡಿರುವ ಹಿನ್ನಲ್ಲೆಯಲ್ಲಿ ಸಂಪುಟ ಪುನಾರಚನೆ ಆಗಬೇಕೆಂದು ಕೆಲವು ಶಾಸಕರು ಕೇಳುತ್ತಿದ್ದಾರೆ. ಸಂಪುಟ ಪುನರ್ ರಚನೆ ಆಗಬೇಕಿದೆ. ಅದು ಯಾವಾಗ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆದರೆ, ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ನಮ್ಮ ತಂದೆ ಸಿಎಂ ಆಗಿರುವವರೆಗೂ ನಾನು ಸಚಿವ ಸ್ಥಾನ ಕೇಳುವುದಿಲ್ಲ ಎಂದು ಹೇಳಿದರು.
ಒಂದೇ ಒಂದು ಸಾಕ್ಷಿ ಕೊಡಲಿ:
ತಮ್ಮ ಮೇಲೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ʻಸಿಎಂ ತಮ್ಮ ಪುತ್ರನನ್ನು ವಸೂಲಿಗೆ ಇಟ್ಟುಕೊಂಡಿದ್ದಾರೆʼ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಡಾ. ಯತೀಂದ್ರ ಸಿದ್ದರಾಮಯ್ಯ, ನನ್ನ ಮೇಲಿನ ಆರೋಪಕ್ಕೆ ಒಂದೇ ಒಂದು ಸಾಕ್ಷಿ ಕೊಡಿ. ವರ್ಗಾವಣೆ ದಂಧೆ ಎನ್ನುತ್ತಾರೆ, ಇದಕ್ಕೆ ಸಾಕ್ಷಿ ಇದೆಯೆ ? ಕಮಿಷನ್ ದಂಧೆ ಎನ್ನುತ್ತಾರೆ ಇದಕ್ಕೆ ಸಾಕ್ಷಿ ಇದೆಯೆ ? ಎಂದು ತಿರುಗೇಟು ನೀಡಿದರು.
ಸಾಕ್ಷಿ ಇಲ್ಲದೆ ಎರಡೂವರೆಗೆ ವರ್ಷದಿಂದ ಕೇವಲ ಆರೋಪ ಮಾಡುತ್ತಿದ್ದಾರೆ. ಸಾಕ್ಷಿ ಕೊಟ್ಟು ಆರೋಪ ಮಾಡಲಿ, ಆಗ ಅದಕ್ಕೆ ಬೆಲೆ ಇರುತ್ತದೆ. ನಾನು ಈಗ ಕುಮಾರಸ್ವಾಮಿ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಬಹುದಾ ? ಸಾಕ್ಷಿಯಿಲ್ಲದೆ ಆರೋಪ ಮಾಡೋದು ಸುಲಭ. ನಾನು ಅನಗತ್ಯವಾಗಿ ಸಾಕ್ಷಿಗಳಿಲ್ಲದೆ ಯಾರ ಮೇಲೂ ಆರೋಪ ಮಾಡುವುದಿಲ್ಲ ಎಂದು ಛೇಡಿಸಿದರು.
ಈ ಸರಕಾರ ಬಂದಾಗಿನಿಂದಲೂ ವಿರೋಧ ಪಕ್ಷಗಳು ಇಲ್ಲ ಸಲ್ಲದ ಆರೋಪ ಮಾಡಿ ಸಾರ್ವಜನಿಕರಲ್ಲಿ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಬೇಕೆಂದು ಪ್ರಯತ್ನಿಸುತ್ತಿದ್ದಾರೆ. ನನ್ನ ತಂದೆ ನನ್ನನ್ನ ವಸೂಲಿಗಾಗಿ ನೇಮಿಸಿಕೊಂಡಿಲ್ಲ. ನನ್ನ ತಂದೆಯ ಪರವಾಗಿ ನಮ್ಮ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ.
ತಂದೆಯ ರಕ್ಷಣಗೆ ರಾಜಕೀಯಕ್ಕೆ ಬಂದೆ:
ನಮ್ಮ ತಂದೆಯ ರಾಜಕೀಯ ಜೀವನ ಮುಂದುವರಿಕೆ ಭಾಗವಾಗಿ ನಾನು ಶಾಸಕ-ಎಂಎಲ್ಸಿ ಆಗಿದ್ದೇನೆ. ನಮ್ಮ ಕ್ಷೇತ್ರದ ಜನರ ರಕ್ಷಣಗೆಗೆ ನಮ್ಮ ತಂದೆಯ ಅಭಿಮಾನಿಗಳ ರಕ್ಷಣಗೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ನಮ್ಮ ಅಣ್ಣ (ರಾಕೇಶ್ ಸಿದ್ದರಾಮಯ್ಯ) ಇಲ್ಲದ ಕಾರಣಕ್ಕೆ ನಾನು ಬಂದೆ. ನಮ್ಮ ತಂದೆ ನನ್ನನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಿಲ್ಲ. ಮಕ್ಕಳನ್ನೇ ಪಕ್ಷದ ರಾಜ್ಯಾಧ್ಯಕ್ಷ, ಎಂಎಲ್ಎ, ಎಂಪಿ ಮಾಡುವುದು ಕುಟುಂಬ ರಾಜಕಾರಣ. ನಮ್ಮದಲ್ಲ ಎಂದು ಕುಟುಂಬ ರಾಜಕಾರಣಕ್ಕೆ ಹೊಸ ವ್ಯಾಖ್ಯಾನವನ್ನು ಡಾ. ಯತೀಂದ್ರ ನೀಡುವ ಮೂಲಕ ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ರಾಜಕೀಯ ಪ್ರೇರಿತ ಮೇಲ್ಮನವಿ:
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಮೇಲ್ಮನವಿ ಹಾಕಿದ್ದಾರೆ. ಅವರಿಗೆ ಮೇಲ್ಮನವಿ ಸಲ್ಲಿಸಲು ಲೋಕಸ್ ಸ್ಟ್ಯಾಂಡಿ ಇಲ್ಲ ಎಂದು ಹೇಳುವ ಮೂಲಕ ಇಡಿಗೆ ನಮ್ಮ ವಿರುದ್ಧ ಮೇಲ್ಮನವಿ ಸಲ್ಲಿಸಲು ಅರ್ಹತೆಯೇ ಇಲ್ಲ ಎಂದು ತಿಳಿಸಿದರು.


