Online News in ಕನ್ನಡ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಮೈಸೂರಲ್ಲಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

ಮೈಸೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣಕ್ಕೆ ಸಂಬಂಧಿಸಿದಂತೆ  ಕೇಂದ್ರ ಬಿಜೆಪಿ ಸರಕಾರವು  ಕಾಂಗ್ರೆಸ್‌ ನಾಯಕರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಿ ಸೇಡಿನ ರಾಜಕೀಯ ಮಾಡಲಾತ್ತಿದೆ ಹಾಗೂ  ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಮೈಸೂರಿನಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ ಪೊಲೀಸರ ತಡೆಯನ್ನು ಲೆಕ್ಕಿಸದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿಕೊಂಡು ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದರು. ಬಿಜೆಪಿ ಕಚೇರಿಯ ರಸ್ತೆಯಲ್ಲೂ ಪೊಲೀಸರು ಬ್ಯಾರಿಕೇಡ್ ಹಾಕಿದ್ದರಿಂದ ಕಚೇರಿ ಯತ್ನ ತಡೆದರು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದ ಪೊಲೀಸರು, ನಂತರ ಬಿಡುಗಡೆ ಮಾಡಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ವರಿಷ್ಠರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದೆ ಎಂದು ದೂರಿದ ಕೈ ಕಾರ್ಯಕರ್ತರು, ಬಿಜೆಪಿ ಕಚೇರಿ ಮುತ್ತಿಗೆ ಹಾಕಲು ನಿರ್ಧರಿಸಿ ಬೀದಿಗಿಳಿದರು. ಹೀಗಾಗಿ ನಗರದ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಜಯಲಕ್ಷ್ಮೀ ವಿಲಾಸ ರಸ್ತೆ ಮಾರ್ಗದ ಮೂಲಕ ಸಾಗಿ, ದೇವ ಪಾರ್ಥಿವ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಬ್ಯಾರಿಕೇಡ್‌ಗಳನ್ನು ಅಳವಡಿಸಿ ಯಾರೂ ಬಿಜೆಪಿ ಕಚೇರಿಯತ್ತ ಸುಳಿಯದಂತೆ ತಡೆಯೊಡ್ಡಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಿರುಕುಳ ನೀಡಿದರು. ಆದರೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯಾಯ ವ್ಯವಸ್ಥೆ ಇನ್ನೂ ಬದುಕಿದೆ ಎಂಬ ಭರವಸೆ ಬಂದಿದೆ. ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿದರೆ ನ್ಯಾಯ ದೊರೆಯಲಿದೆ. ದೃತಿಗೇಡಬೇಕಿಲ್ಲ.

ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ.

ಇದಕ್ಕೂ ಮುನ್ನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇಡಿ ದುರ್ಬಳಕೆಗೆ ದೆಹಲಿ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದ್ದು ಸುಳ್ಳಿನ ವಿರುದ್ಧ ಸತ್ಯಕ್ಕೆ ಬಹುದೊಡ್ಡ ಗೆಲುವು ದೊರೆತಿದೆ ಎಂಬ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಬಳಿಕ ಬಿಜೆಪಿ ಕಚೇರಿಯತ್ತ ಹೊರಟ ಕಾಂಗ್ರೆಸ್ ಮುಖಂಡರು ಮತ್ತು ಯುವ ಕಾರ್ಯಕರ್ತರು, ಬಿಜೆಪಿ ತೊಲಗಲಿ, ಬಿಜೆಪಿಗೆ ಧಿಕ್ಕಾರ ಘೋಷಣೆ ಕೂಗಿದರು.

ಪ್ರತಿಭನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ವಕ್ತಾರ ಎಂ.ಲಕ್ಷ್ಮಣ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮುಖಂಡರಾದ ಕೆ.ವಿ.ಮಲ್ಲೇಶ್, ನಾಗೇಶ್ ಕಾರ್ಯಪ್ಪ, ಈಶ್ವರ್ ಚಕ್ಕಡಿ, ಪುಷ್ಪಾಲತಾ ಚಿಕ್ಕಣ್ಣ, ಟಿ.ಬಿ.ಚಿಕ್ಕಣ್ಣ, ಎಲ್.ಭಾಸ್ಕರ್ ಗೌಡ, ಚಾಮರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ಬಸವಣ್ಣ, ಡೈರಿ ವೆಂಕಟೇಶ್, ವಿ.ರಾಮಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಸುನಿಲ್, ನಾಗೇಶ್, ರಾಜೇಶ್, ಸೇವಾದಳದ ಗಿರೀಶ್, ಮೋದಾಮಣಿ, ಮಾಧ್ಯಮ ವಕ್ತಾರ ಮಹೇಶ್.ಕೆ, ಅಶೋಕ, ಅಬ್ರಾರ್, ಶಿವಪ್ರಕಾಶ್, ಕೆ.ಎಸ್.ಶಿವರಾಮು, ಸುಜತಾ ರಾವ್, ಸೋಮಶೇಖರ್, ಟಿ.ಬಿ.ಚಂದ್ರಕಲಾ ಸೇರಿದಂತೆ ಹಲವರಿದ್ದರು.

 

 

 

Call Now Button