Online News in ಕನ್ನಡ

ಫಿಟ್‌ ಮೈಸೂರು ವಾಕಥಾನ್‌ಗೆ ಮೈಸೂರು ಸಜ್ಜು : ಜ.11ರಂದು ಜಾಗೃತಿ ಅಭಿಯಾನ

ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ

ಮೈಸೂರು: ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ’ಫಿಟ್‌ ಮೈಸೂರು’ ಕಾರ್ಯಕ್ರಮದ ಮೂಲಕ ಮತ್ತೊಂದು ಮಹತ್ವದ ಸಾಮಾಜಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸಜ್ಜಾಗುತ್ತಿದೆ.

ಮೈಸೂರನ್ನು ಸುಸಜ್ಜಿತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯ, ಜಿಎಸ್‌ಎಸ್‌ ಸಿಎಸ್‌ಆರ್‌, ಜಿಮ್‌ ಅಸೋಸಿಯೇಷನ್‌ ಮತ್ತು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ’ನಮ್ಮ ನಡಿಗೆ, ಆರೋಗ್ಯದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಜ.11ರಂದು ನಡೆಸುತ್ತಿರುವ ’ಫಿಟ್‌ ಮೈಸೂರು ವಾಕಥಾನ್‌’ಗೆ ಅರಮನೆಗಳ ನಗರಿ ಸನ್ನದ್ಧವಾಗಿದೆ. ಆರೋಗ್ಯಕರ ಮೈಸೂರು, ಸ್ವಚ್ಛ ಮೈಸೂರು, ಹಸಿರು ಮೈಸೂರು, ಸುರಕ್ಷಿತ ಮೈಸೂರು ಎಂಬ ಆಲೋಚನೆಯೊಂದಿಗೆ ವಾಕಥಾನ್‌ ಆಯೋಜಿಲಾಗಿದೆ. ಈ ಮಹತ್ವದ ಕಾರ್ಯಕ್ರಮ ಹಾಗೂ ಅದರ ಹಿಂದಿನ ಉದ್ದೇಶಗಳ ಕುರಿತಂತೆ ಜಿಎಸ್‌ಎಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಯೋಗಾತ್ಮ ಶ್ರೀಹರಿ ದ್ವಾರಕನಾಥ್‌ ಅವರು ತಮ್ಮ ಅನಿಸಿಕೆ ಹಾಗೂ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಫಿಟ್ ಮೈಸೂರು ಪರಿಕಲ್ಪನೆ:
ಸಾಮಾನ್ಯವಾಗಿ ಪ್ರತಿಯೊಬ್ಬರೂ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ವಾಕಿಂಗ್ ಮಾಡುವ ಹವ್ಯಾಸ ಮೈಗೂಡಿಸಿಕೊಂಡಿರುತ್ತಾರೆ. ಅದರಂತೆ ಶ್ರೀಹರಿ ದ್ವಾರಕನಾಥ್‌ ಅವರು ಕೂಡ ಕಳೆದ 20 ವರ್ಷಗಳಿಂದಲೂ ನಿತ್ಯವೂ ವಾಕಿಂಗ್‌ ಮಾಡುವ ಹವ್ಯಾಸ ಹೊಂದಿದ್ದು, ವಾಕಿಂಗ್‌ ಸಂದರ್ಭದಲ್ಲಿ ದೈಹಿಕ ಆರೋಗ್ಯ ಕಾಪಾಡುವುದರೊಂದಿಗೆ, ಹೊಸಬರ ಪರಿಚಯ, ಹೊಸ ಆಲೋಚನೆಗಳಿಂದ ಸಾಮಾಜಿಕ ಆರೋಗ್ಯವೂ ವೃದ್ಧಿಯಾಗುತ್ತದೆ ಎಂಬುದು ಅವರ ನಂಬಿಕೆ. ಕೆಲವು ತಿಂಗಳುಗಳ ಹಿಂದೆ ಹೃದಯಾಘಾತಕ್ಕೊಳಗಾಗಿ ವೈದ್ಯಕೀಯ ಚಿಕಿತ್ಸೆ ಪಡೆದ ಶ್ರೀಹರಿ ಅವರಿಗೆ ನಿತ್ಯವೂ ತಪ್ಪದೇ ವಾಕಿಂಗ್‌ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆಯಂತೆ ವಾಕಿಂಗ್‌ ಮುಂದುವರಿಸಿದ ಶ್ರೀಹರಿ ಅವರು, ತಮ್ಮೊಂದಿಗೆ ಎಲ್ಲರನ್ನೂ ಒಗ್ಗೂಡಿಸುವ ಮನಸ್ಸಿನೊಂದಿಗೆ ಕಾರ್ಯಪ್ರವೃತ್ತರಾದಾಗ ಹುಟ್ಟಿಕೊಂಡದ್ದೇ ಫಿಟ್‌ ಮೈಸೂರು ವಾಕಥಾನ್‌.

ರಾಜಕೀಯದ ಆಸೆ, ಆಸಕ್ತಿ ಇಲ್ಲ:
ʻಊರು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರಲಿದೆʼ ಎಂಬ ಆಲೋಚನೆ ನನ್ನದು. ಹೀಗಾಗಿ ಊರು ಕಟ್ಟುವ ನಿಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿ ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ. ಮೈಸೂರಿನ ಜನರು ಪಕ್ಷಾತೀತ ಮತ್ತು ಧರ್ಮಾತೀತವಾಗಿ ನನ್ನನ್ನು ಒಪ್ಪಿದ್ದಾರೆ. ಹೀಗಾಗಿ ನಾನು ನಡೆಸುವ ಕಾರ್ಯಕ್ರಮಗಳ ಹಿಂದೆ ರಾಜಕೀಯ ಸೇರುವ ಅಥವಾ ರಾಜಕೀಯವಾಗಿ ಗುರುತಿಸಿಕೊಳ್ಳುವ ಯಾವುದೇ ಆಲೋಚನೆ, ಆಸೆ ಅಥವಾ ಆಸಕ್ತಿಯೂ ನನಗಿಲ್ಲ ಎಂಬುದನ್ನು ಶ್ರೀಹರಿ ಅವರು ಸ್ಪಷ್ಟಪಡಿಸಿದ್ದಾರೆ.

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಡಿಗೆ ಅತ್ಯಂತ ಕಡಿಮೆ ವೆಚ್ಚದ ಹಾಗೂ ಸುಲಭ ಮಾರ್ಗವಾಗಿದೆ. ಎಲ್ಲೋ ಒಂದೆಡೆ ಸೇರುವುದಕ್ಕಿಂತ ನಡಿಗೆಯ ಉದ್ದೇಶಕ್ಕೆ ಎಲ್ಲರೂ ಒಂದೆಡೆ ಸೇರಿದರೆ ಪರಸ್ಪರ ಪರಿಚಯ, ಹೊಸ ಐಡಿಯಾಗಳು ಹುಟ್ಟಲಿದೆ. ಈ ಉದ್ದೇಶದಿಂದ ಫಿಟ್‌ ಮೈಸೂರು ವಾಕಥಾನ್‌ ನಡೆಸುತ್ತಿದ್ದು, ಯೋಗ, ದಸರಾ ಕಾರ್ಯಕ್ರಮಗಳಂತೆ ಪ್ರತಿವರ್ಷ ವಾಕಥಾನ್‌ ನಡೆಸಲಾಗುತ್ತದೆ.

ಶ್ರೀಹರಿ ಯೋಗಾತ್ಮ,
ಮುಖ್ಯಸ್ಥರು, ಜಿಎಸ್‌ಎಸ್‌ ಸಮೂಹ ಸಂಸ್ಥೆಗಳು.

ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ:
ಆರಂಭಿಕ ದಿನಗಳಲ್ಲಿ 40-50 ಜನರೊಂದಿಗೆ ನಡೆಸಲಾಗುತ್ತಿದ್ದ ಫಿಟ್‌ ಮೈಸೂರು ವಾಕಥಾನ್‌ಗೆ ದಿನಗಳು ಕಳೆದಂತೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈಸೂರಿನ ವಿವಿಧ ಸಂಘ ಸಂಸ್ಥೆಗಳ ಬೆಂಬಲ, ಸಹಕಾರದೊಂದಿಗೆ ನಡೆದು ಬಂದಿರುವ ಫಿಟ್‌ ಮೈಸೂರು ಅಭಿಯಾನ ಎರಡು ವರ್ಷಗಳ ಹೊಸ್ತಿಲಿಗೆ ತಲುಪಿದೆ. ಪರಿಣಾಮ ಆರಂಭಿಕ ದಿನಗಳಲ್ಲಿ 40-50 ಜನರಿಂದ ನಡೆಸುತ್ತಿದ್ದ ಫಿಟ್‌ ಮೈಸೂರು ವಾಕಥಾನ್‌ಗೆ ಇದೀಗ ಸಾವಿರಾರು ಜನರು ಭಾಗವಹಿಸುತ್ತಿದ್ದು, ಜ.11ರಂದು ನಡೆಯುವ ಬೃಹತ್‌ ವಾಕಥಾನ್‌ನಲ್ಲಿ ಅಂದಾಜು 7ರಿಂದ 8 ಸಾವಿರಕ್ಕೂ ಜನರು ಸೇರುವ ನಿರೀಕ್ಷೆ ಮೂಡಿಸಿದೆ.

ಊರಿನ ಋಣ ತೀರಿಸೋಣ:
ದಶಕಗಳ ಹಿಂದೆ ಬೆಂಗಳೂರಿನಿಂದ ಮೈಸೂರಿಗೆ ಬಂದ ಶ್ರೀಹರಿ ಅವರಿಗೆ ಮೈಸೂರು ಎಲ್ಲವನ್ನೂ ನೀಡಿದೆ. ತಮ್ಮ ಬದುಕಿಗೆ ಯಶಸ್ಸು, ಖ್ಯಾತಿ, ಗೌರವವನ್ನು ಕೊಟ್ಟಿರುವ ಮೈಸೂರಿನ ಋಣ ತೀರಿಸಬೇಕೆಂಬುದು ಅವರ ಆಲೋಚನೆ. ಇದಕ್ಕಾಗಿಯೇ ಒಂದಿಲ್ಲೊಂದು ಕಾರ್ಯಕ್ರಮಗಳ ಮೂಲಕ ಮೈಸೂರಿನ ಪ್ರಗತಿ, ಸರ್ವತೋಮುಖ ಬೆಳವಣಿಗೆಗೆ ಕೊಡುಗೆ ನೀಡುತ್ತಾ ಬಂದಿರುವ ಶ್ರೀಹರಿ ಅವರು, ಈಗ ಫಿಟ್‌ ಮೈಸೂರು ಮೂಲಕ ಆರೋಗ್ಯಕರ ಮೈಸೂರು ನಿರ್ಮಾಣದ ಪರಿಕಲ್ಪನೆ ಹೊಂದಿದ್ದಾರೆ.

ಫಿಟ್‌ ಮೈಸೂರು ಯೋಜನೆ:
ಮೈಸೂರು ವಿಶ್ವವಿದ್ಯಾಲಯ, ಜಿಎಸ್‌ಎಸ್‌ ಸಿಎಸ್‌ಆರ್‌, ಜಿಮ್‌ ಅಸೋಸಿಯೇಷನ್‌ ಮತ್ತು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಜ.11ರ ಬೆಳಗ್ಗೆ 5.30ಕ್ಕೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಿಂದ ಫಿಟ್‌ ಮೈಸೂರು ವಾಕಥಾನ್‌ ಆರಂಭಗೊಳ್ಳಲಿದೆ. ಬಳಿಕ 5 ಕಿ.ಮೀ. ವ್ಯಾಪ್ತಿಯ ವಾಕಥಾನ್‌ ಕುಕ್ಕರಹಳ್ಳಿ ಕೆರೆ ವ್ಯಾಪ್ತಿಯಲ್ಲಿ ಸಂಚರಿಸಿ, ಮತ್ತೆ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಮುಕ್ತಾಯಗೊಳ್ಳಲಿದೆ. ಈ ವೇಳೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ವಂದೇ ಮಾತರಂ ಗಾಯನ ನಡೆಯಲಿದೆ. ವಾಕಥಾನ್‌ ಆರಂಭಕ್ಕೂ ಮುನ್ನ ಝುಂಬಾ ನೃತ್ಯ ನಡೆಸಲಾಗುತ್ತದೆ. ವಾಕಥಾನ್‌ ಯಶಸ್ಸಿಗಾಗಿ ಗ್ರಾವಿಟಿ ಒನ್‌, ಕರ್ನಾಟಕ ಬ್ಯಾಂಕ್‌, ನಾರಾಯಣ ಹೃದಯಾಲಯ, ಎಂಡಿಜೆಎ, ಡಿಆರ್‌ಸಿ ಹಾಗೂ ಟ್ರಿಪ್‌ ದಾರ್‌ ಸೇರಿದಂತೆ ಶಾಲಾ-ಕಾಲೇಜುಗಳು, ಹಾಸ್ಟೆಲ್‌ಗಳು, ಎನ್‌ಎಸ್‌ಎಸ್‌, ಎನ್‌ಜಿಒಗಳು, ವಿವಿಧ ವ್ಯಾಪಾರಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಸಾರ್ವಜನಿಕರು ಬೆಂಬಲ ನೀಡಿವೆ ಎಂದು ಶ್ರೀಹರಿ ಅವರು ತಿಳಿಸಿದ್ದಾರೆ.

Call Now Button