Online News in ಕನ್ನಡ

ಮೈಸೂರಿಗೆ ಪ್ರತ್ಯೇಕ ಎನ್‌ಸಿಬಿ ಸ್ಟೇಷನ್‌ ಬೇಕು : ಸಂಸದ ಯದುವೀರ್‌ ಒತ್ತಾಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಡ್ರಗ್ಸ್‌ ಮಾಫಿಯಾ ಈ ಪ್ರಮಾಣದಲ್ಲಿ ಪತ್ತೆಯಾಗಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಮೈಸೂರು-ಮಡಿಕೇರಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕಳವಳ ವ್ಯಕ್ತಪಡಿಸಿದರು.
ಮೈಸೂರಿನ ಹೆಬ್ಬಾಳದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿರುವ ಹಿನ್ನಲ್ಲೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕೇಂದ್ರ ಸಂಸ್ಥೆ ಬಂದು ಮೈಸೂರಿನಲ್ಲಿ ಡ್ರಗ್ಸ್‌ ಪತ್ತೆ ಮಾಡಿದ್ದು, ರಾಜ್ಯದ ಪೊಲೀಸರಿಗೆ ಇದು ಗೊತ್ತಾಗಲಿಲ್ಲವೇ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ತಮ್ಮ ಜಿಲ್ಲೆಯಲ್ಲಿ ಏನಾಗುತ್ತಿದೆ ಎಂದು ಅವರಿಗೆ ತಿಳಿದಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು.
ಚುನಾವಣೆ ಸಂದರ್ಭದಲ್ಲಿ ಇದು ನನ್ನ ತವರು ಕ್ಷೇತ್ರ, ನನ್ನ ಪ್ರತಿಷ್ಠೆಯ ಪ್ರಶ್ನೆ, ಮತ ನೀಡಿ ಎಂದು ಕೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಪ್ರಕರಣಗಳ ಬಗ್ಗೆ ಪ್ರತಿಷ್ಠೆಯಾಗಿ ಸ್ವೀಕರಿಸಬೇಕು. ಯಾವುದೇ ಒಂದು ರಾಜ್ಯ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಆ ರಾಜ್ಯದ ಕಾನೂನು ಸುವ್ಯವಸ್ಥೆ ಬಲವಾಗಿರಬೇಕು. ಉತ್ತರ ಪ್ರದೇಶದಲ್ಲಿ ಒಂದೇ ಒಂದು ಅಕ್ರಮ ಚಟುವಟಿಕೆಗಳು ನಡೆಯುವುದಿಲ್ಲ. ಇಂತಹ ಕಠಿಣ ಆಡಳಿತ ರಾಜ್ಯಕ್ಕೂ ಬರಬೇಕು ಎಂದು ತಿಳಿಸಿದರು.
ಮೈಸೂರಿನಲ್ಲಿ ಈ ಹಿಂದೆ ರಿಂಗ್‌ ರೋಡ್‌ನಲ್ಲಿ ಒಂದು ಡ್ರಗ್ಸ್‌ ಘಟಕ ಪತ್ತೆಯಾದಾಗಲೇ ಇಂತಹ ಚಟುವಟಿಕೆ ಮೈಸೂರಿನಲ್ಲಿ ಅತೀ ಹೆಚ್ಚಾಗಿ ನಡೆಯುತ್ತಿದೆ ಎಂದು ಹೇಳಿದ್ದೆ. ನಮ್ಮ ಕಚೇರಿಗೆ ಈಗಲೂ ಸಾರ್ವಜನಿಕರು ಫೋನ್‌ ಮಾಡ್ತಾರೆ. ನರಸಿಂಹರಾಜ ಕ್ಷೇತ್ರದ ಉದಯಗಿರಿಯಲ್ಲಿ ಸಲೂಷನ್‌ ಪಾರ್ಕ್‌ ಅಂತ ಇದೆಯಂತೆ. ಅಲ್ಲಿ ಅನೇಕ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ತಿಳಿಸಿದರು.

Call Now Button