ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರ ಮನಸೆಳೆಯುವ ಅರಮನೆಯ ಕಾಯಕಲ್ಪನ್ನೆ ಸರಕಾರ ಮನಸ್ಸು ಮಾಡಬೇಕಿದೆ..
ವಿಶೇಷ ವರದಿ: ರವಿಕಿರಣ್ ಪಿ.


ಮೈಸೂರು: ಚಾರಿತ್ರಿಕ ನಗರಿ ಮೈಸೂರಿಗೆ ಅರಮನೆಗಳ ನಗರಿ ಎಂಬ ಬಿರುದು ತಂದುಕೊಟ್ಟ ಅಂಬಾವಿಲಾಸ ಅರಮನೆಯ ಅಂದಕ್ಕೆ ಮತ್ತೊಂದು ಅರಮನೆ ಇಲ್ಲ. ಇಲ್ಲಿನ ವಾಸ್ತುಶಿಲ್ಪ, ದೀಪಾಲಂಕಾರ, ದರ್ಬಾರ್ ಹಾಲ್ ಹಾಗೂ ಐತಿಹಾಸಿಕ ಹಿನ್ನಲ್ಲೆಯಿಂದಾಗಿ ಅಂಬಾವಿಲಾಸ ಅರಮನೆ ಜಗತ್ತನ್ನು ಆಕರ್ಷಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಅರಮನೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವ ಈ ಅಂದದ ಅರಮನೆ ಕಟ್ಟಡಗಳು ದಿನಗಳು ಉರುಳಿದಂತೆ ದುರ್ಬಲಗೊಳ್ಳುತ್ತಿದೆಯೇ ? ಎಂಬ ಪ್ರಶ್ನೆ ಮೂಡಿದೆ.
ಹೌದು ! ಅಂದಕ್ಕೆ ಮತ್ತೊಂದು ಹೆಸರೇ ಅಂಬಾವಿಲಾಸ ಅರಮನೆ ಎಂದು ಬೀಗುವ ಮೈಸೂರಿಗರಿಗೆ ಆತಂಕದ ಸುದ್ದಿ ಇದೆ. ಇಂದು ಬೆಳಗ್ಗೆ ಅರಮನೆಯ ಪಶ್ಚಿಮಕ್ಕೆ ಇರುವ ವರಾಹ ಪ್ರವೇಶದ್ವಾರಗಳ ಛಾವಣಿಯ ಮೇಲ್ಪದರದ ಗಾರೆ ಕುಸಿದಿದೆ. ಅದೃಷ್ಟ ವಶಾತ್ ಪ್ರವಾಸಿಗರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ, ಅರಮನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ಗುಮ್ಮಟಗಳು, ಕಮಾನುಗಳು, ಗೋಪುರಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಹಿಂದೊಮ್ಮೆ ಮಳೆ ಬಂದಾದ ಅರಮನೆ ಸೋರುತ್ತಿದ್ದ ಸುದ್ದಿಯೂ ಪ್ರಕಟವಾಗಿತ್ತು.ಇಂದು ಬೆಳಗ್ಗೆ ವರಾಹ ದ್ವಾರದ ಛಾವಣಿ ಗಾರೆಯ ಪದರಗಳು ಕೆಳಗೆ ಬಿದ್ದಿದೆ. ಅದೃಷ್ಟ ವಶಾತ್ ಕೆಳಗೆ ಬೈಕ್ ನಿಲ್ಲಿಸಿದ್ದರಿಂದ ಪದರಗಳು ಬೈಕ್ ಮೇಲೆ ಬಿದ್ದಿದೆ. ಬಿದ್ದ ರಬಸಕ್ಕೆ ಬೈಕ್ ಹ್ಯಾಂಡಲ್ ಬೆಂಡಾಗಿದೆ. ಅರಮನೆ ಮಂಡಳಿಗೆ ವಿಷಯ ತಿಳಿಯುತ್ತಿದ್ದಂತೆಯೆ ಪದರಗಳ ಅವಶೇಷಗಳನ್ನು ತೆರವುಗೊಳಿಸಿ ಸುತ್ತ ಬ್ಯಾರಿಕ್ಯಾಡ್ ನಿಲ್ಲಿಸಿ ಏನೂ ನಡೆದೇ ಇಲ್ಲವೆಂಬಂತೆ ತೋರ್ಪಡಿಸಿಕೊಳ್ಳಲಾಗಿದೆ.

ದಾಖಲೆ ಪ್ರವಾಸಿಗರ ಭೇಟಿ:
ಅಂಬಾವಿಲಾಸ ಅರಮನೆಗೆ 2023-24ರಲ್ಲಿ ಸುಮಾರು 40,56,975 ಪ್ರವಾಸಿಗರು ಭೇಟಿ ನೀಡಿದ್ದು, ಈ ಪೈಕಿ 34,604 ಮಂದಿ ವಿದೇಶಿ ಪ್ರವಾಸಿಗರಿದ್ದರು. ಇನ್ನು ಏಪ್ರಿಲ್ 2024ರಿಂದ ಮಾರ್ಚ್ 2025ರವರೆಗೆ 39,35,108 ಪ್ರವಾಸಿಗರು ಭೇಟಿ ನೀಡಿದ್ದು ಈ ಪೈಕಿ 44,788 ಮಂದಿ ವಿದೇಶಿ ಪ್ರವಾಸಿಗರಿದ್ದಾರೆ. ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಅಂಬಾವಿಲಾಸ ಅರಮನೆಯ ಕೊಡುಗೆ ಅಪಾರವಾಗಿದೆ.
ಹಿನ್ನಲ್ಲೆ: 1897ರಲ್ಲಿ ಬೆಂಕಿ ಬಿದ್ದು ಸುಟ್ಟುಹೋದ ಹಳೆಯ ಅರಮನೆಯ ಸ್ಥಳದಲ್ಲಿ ನಿರ್ಮಿಸಲಾಗಿರುವ ಈ ಇಂಡೋ-ಸಾರ್ಸೆನಿಲ್ ಶೈಲಿಯ ಅಂಬಾವಿಲಾಸ ಅರಮನೆ ಹಿಂದೂ, ಮುಸ್ಲಿಂ, ಬ್ರಿಟಿಷ್ ಮತ್ತು ರಾಜಸ್ಥಾನಿ ವಾಸ್ತುಶಿಲ್ಪದ ಅಂಶಗಳ ಮಿಶ್ರಣವಾಗಿದ್ದು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ನಿರ್ಮಾಣಗೊಂಡ ಅರಮನೆಯ ವಿದ್ಯಾಸವನ್ನು ಹೆನ್ರಿ ಇರ್ವಿನ್ ಮಾಡಿದ್ದಾರೆ. ವಿಶ್ವ ವಿಖ್ಯಾತ ದಸರಾ ಮತ್ತು ರಜೆಯ ದಿನಗಳಲ್ಲಿ ದೀಪಾಲಂಕಾರದಿಂದ ಕಂಗೊಳಿಸುವ ಅಂಬಾವಿಲಾಸ ಅರಮನೆ ಪ್ರವಾಸಿಗರ ಮತ್ತೊಂದು ಆಕರ್ಷಣೆ. ಇಲ್ಲಿನ ದರ್ಬಾರ್ ಹಾಲ್ ಮತ್ತೊಂದು ವಿಶೇಷ.
ಇಂತಹ ಅರಮನೆಯ ಹೊರ ಭಾಗದ ಗೋಡೆಗಳು ಬಿರುಕು ಬಿಡುತ್ತಿದ್ದು, ಇಂದು ವರಾಹ ಪ್ರವೇಶ ದ್ವಾರದ ಛಾವಣಿಯ ಮೇಲ್ಪದರದ ಗಾರೆ ಭಾಗಗಳು ಉದುರುತ್ತಿದ್ದು, ಕೆಲವು ಕಡೆ ಬಿರುಕುಗಳು ಕಾಣಿಸಿಕೊಂಡಿದೆ. ಇನ್ನು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಲರಾಮ ದ್ವಾರದ ಬಳಿ ಅರಮನೆ ಕಟ್ಟದ ಭಾಗಗಳು ಕುಸಿದು ಬಿದ್ದಿದ್ದು ಅರಮನೆಯ ಅಂದಕ್ಕೆ ಅಡ್ಡಿಯುಂಟು ಮಾಡಿದೆ. ಸರಕಾರ ಈ ಕೂಡಲೆ ಅರಮನೆಯ ಕಟ್ಟಡ ಸಂರಕ್ಷಣೆಗೆ ಗಮನಹರಿಸಬೇಕೆಂಬುವುದೇ ಮೈಸೂರಿಗರ ಒತ್ತಾಸೆ.


