ನಂಜನಗೂಡು :ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿಂದು ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ೨೦೨೫ನೇ ಸಾಲಿನ ಚಿಕ್ಕಜಾತ್ರೆ ರಥೋತ್ಸವವು ಸಂಭ್ರಮ ಸಡಗರ ಹಾಗೂ ಶ್ರದ್ದಾ ಭಕ್ತಿಯಿಂದ ನೆರವೇರಿತು. ಇಂದು ಬೆಳಿಗ್ಗೆ ೯ ರಿಂದ ೯.೩೦ರವರೆ ಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಪಾರ್ವತಿ ಸಮೇತ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ರಥೋತ್ಸವವು ಯಾವುದೇ ಅಡೆ ತಡೆ ಇಲ್ಲದೇ ವಿಜೃಂಭಣೆಯಿಂದ ನಡೀತು.
ದೇವಸ್ಥಾನದ ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ಪೂಜಾ ಕೈಂಕರ್ಯಗಳನ್ನು ಶಾಸ್ತ್ರೋಕ್ತ ರೀತಿಯಲ್ಲಿ ನೆರವೇರಿಸಿದರು.
ರಥೋತ್ಸವದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ದೇವಸ್ಥಾನದ ಪಾರುಪತ್ತೆಗಾರ ಶಿವಶಂಕರ್ ದೀಕ್ಷಿತ್ ಸೇರಿದಂತೆ ದೇವಸ್ಥಾನದ ಇತರೇ ಸಿಬ್ಬಂದಿಗಳು ಅರ್ಚಕರುಗಳು ಭಾಗವಹಿಸಿ, ರಥದ ಚಕ್ರಕ್ಕೆ ಪೂಜೆ ಸಲ್ಲಿಸಿ, ಈಡುಗಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುದರು.
ಇದಕ್ಕೂ ಮುನ್ನ ಚಿನ್ನಾಭರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ಅಲಂಕೃತಗೊಂಡಿದ್ದ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಸೇರಿದಂತೆ ಶ್ರೀ ಪಾರ್ವತಿ ಅಮ್ಮನವರು ಗಣೇಶ ಮತ್ತು ಚಂಡಿಕೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನ ದೇವಾಲಯದ ಗರ್ಭಗುಡಿಯಿಂದ ಹೊರತಂದು ದೇವಸ್ಥಾನದ ಹೊರಾಂಗಣ ಪ್ರಾಂಗಣದಲ್ಲಿರಿಸಿ ಹಲವು ಧಾರ್ಮಿಕ ವಿಧಿ ವಿಧಾನಗಳೋಂದಿಗೆ ಶಾಸ್ತ್ರೋಕ್ತವಾಗಿ ಪೂಜೆಯನ್ನ ಸಲ್ಲಿಸಲಾಯ್ತು.
ದೇವಸ್ಥಾನದ ಸುತ್ತ ಮೆರವಣಿಗೆ ಬಂದ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ಬಟಿಂಗ್ಸ್ ಹಾಗೂ ಬಾವುಟಗಳಿಂದ ಅಲಂಕರಿಸಲಾದ ೩ ರಥಗಳಲ್ಲಿ ಕೂರಿಸಲಾಯ್ತು. ಮೊದಲ ರಥದಲ್ಲಿ ಶ್ರೀ ಗಣಪತಿ, ಚಂಡಿಕೇಶ್ವರ, ೨ನೇ ರಥಧಲ್ಲಿ ಶ್ರೀ ಶ್ರೀಕಂಠೇಶ್ವರ, ೩ನೇ ರಥದಲ್ಲಿ ಶ್ರೀ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗಳನ್ನು ವಿರಾಜಮಾನ ರಾಗಿ ಪಟ್ಟಣದ ರಥ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯ್ತು.
ಆಗಮಿಸಿದ್ದ ಸಾವಿರಾರು ಭಕ್ತರು ಚಿಕ್ಕ ಜಾತ್ರೆಯ ರಥೋತ್ಸವದಲ್ಲಿ ಪಾಲ್ಗೊಂಡು, ರಥ ಎಳೆದು, ಹಣ್ಣು ದವನ ಎಸೆದು ತಮ್ಮ ಭಕ್ತಿಯ ಪರಾಕಷ್ಟೆ ಮೆರೆದರು.
ಇನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಶಾಲಾ ಮಕ್ಕಳು, ಬೀದಿ ಬದಿ ವ್ಯಾಪಾರಿಗಳು ಮತ್ತು ಸುತ್ತ ಮುತ್ತಲ ನಿವಾಸಿಗಳು ಸೇರಿದಂತೆ ಸಾವಿರ ಸಾವಿರ ಸಂಖ್ಯೆ ಜನ, ರಥ ಬೀದಿಯಲ್ಲಿ ಸಾಗುತ್ತಿದ್ದ ಉತ್ಸವ ಮೂರ್ತಿಗಳನ್ನು ಕಣ್ತುಂಬಿಕೊಂಡು , ಕೈ ಮುಗಿದು ಬೇಡಿಕೊಂಡು, ಜೈ ನಂಜುಂಡೇಶ್ವರ ಅನ್ನೋ ಘೋಷಣೆಗಳನ್ನು ಕೂಗಿ ಚಿಕ್ಕಜಾತ್ರೆ ರಥೋತ್ಸವದ ಸಂಭ್ರಮ ಸಡಗರದಲ್ಲಿ ಮಿಂದೆದ್ದರು
ದೇವಸ್ಥಾನದ ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ಮಾಧ್ಯಮಗಳೊಂದಿಗೆ ಮಾತನಾಡಿ, ಪೂರ್ಣಿಮೆ ದಿನ ಚಿಕ್ಕಜಾತ್ರೆ ನಡೆದಿರೋದು ವಿಶೇಷವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶಾಸ್ತ್ರೋಕ್ತ ರೀತಿಯಲ್ಲಿ ಪೂಜಾ ಕೈಂಕರ್ಯ ನೆರವೇರಸಿ, ರಥೋತ್ಸವ ಸಂಪನ್ನಗೊಂಡಿದೆ. ಸಾವಿರಾರು ಸಂಖ್ಯೆ ಭಕ್ತರು ಆಗಮಿಸಿ, ಪೂಜಾ ಕೈಂಕರ್ಯಗಳನ್ನು ಕಣ್ತುಂಬಿಕೊಂಡಿದ್ದಾರೆ ಅಂತ ಈ ಬಾರಿಯ ಚಿಕ್ಕಜಾತ್ರೆ ವಿಶೇಷತೆ ಮತ್ತು ಪೂಜಾ ಕೈಂಕರ್ಯಗಳ ಬಗ್ಗೆ ವಿವರಿಸಿದರು.
ಆಗಮಿಸಿದ್ದ ಭಕ್ತರು ಮತ್ತು ವ್ಯಾಪಾರಸ್ಥರುಗಳು ಮಾತನಾಡಿ, ಇವತ್ತಿನ ಚಿಕ್ಕಜಾತ್ರೆ ನಮಗೆ ಹೊಸದಲ್ಲ, ಕಳೆದ ಹತ್ತಾರು ವರ್ಷದಿಂದ ಇದನ್ನು ಕಣ್ಣಾರೆ ನೋಡುತ್ತ ಬಂದಿದ್ದೇವೆ. ಭಗವಂತನ ಮೇಲೆ ಭಕ್ತರುಗಳು ಇಟ್ಟಿರುವ ನಂಬಿಕೆಯಿಂದ ಉತ್ತಮ ವ್ಯಾಪಾರ ನಡೀತ ಇದ್ದು, ಭಕ್ತರ ಎಲ್ಲಾ ಕಷ್ಟ ಕಾರ್ಪಣ್ಯಗಳು ನಿವಾರಣೆ ಆಗ್ತ ಇದೆ ಅಂತ ಖುಷಿ ವ್ಯಕ್ತಪಡುಸುದರು..


