Online News in ಕನ್ನಡ

ಪಿರಿಯಾಪಟ್ಟಣ: ಒಳ ಮೀಸಲಾತಿ ಅನ್ಯಾಯದ ವಿರುದ್ಧ ಬಲಗೈ ಪ್ರತಿಭಟನೆ

ಪಿರಿಯಾಪಟ್ಟಣ: ಪರಿಶಿಷ್ಟಜಾತಿಯ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಬುಧವಾರ ಬಲಗೈ ಸಮುದಾಯದವರು ರಸ್ತೆ ತಡೆ ನಡೆಸಿ, ಪ್ರತಿಭಟಿಸಿ, ಉಪ ತಹಶೀಲ್ದಾರ್ ಶಕೀಲಾ ಬಾನು ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಲಗೈ ಸಮುದಾಯದ ಮುಖಂಡ ಐಲಾಪುರ ರಾಮು ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿ ರಾಜ್ಯದ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಯಾವುದೇ ಕಾರಣಕ್ಕೂ ನಾಗಮೋಹನ್ ದಾಸ್ ಕೊಟ್ಟಿರುವ ಒಳ ಮೀಸಲಾತಿ ವರದಿಯನ್ನು ಜಾರಿಗೆ ತರಬಾರದು. ಇಲ್ಲಿ ಪ್ರವರ್ಗ ಎ,ಬಿ,ಸಿ ಎಂದು ವಿಂಗಡಿಸಿ ಬಲಗೈ ಸಮುದಾಯವನ್ನು ಕಡೆಗಣಿಸಲಾಗಿದೆ. ಇದರಿಂದ ಬಲಗೈ ಸಮುದಾಯದ ವಿದ್ಯಾವಂತ ಮಕ್ಕಳಿಗೆ ಅನ್ಯಾಯವಾಗಲಿದೆ. ನಾಗಮೋಹನ್ ದಾಸ್ ವರದಿಯನ್ನು ಕೈಬಿಟ್ಟು ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.


ದಲಿತ ಮುಖಂಡ ಬೆಣಗಾಲ್ ಧನರಾಜ್ ಮಾತನಾಡಿ, ನಾಗಮೋಹನ್ ದಾಸ್‌ ಅವರು ಸರ್ಕಾರಕ್ಕೆ ಏಕ ಪಕ್ಷೀಯವಾಗಿ ವರದಿ ಕೊಟ್ಟಿರುವುದೇ ಇದಕ್ಕೆಲ್ಲ ಕಾರಣ. ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ವರದಿಯನ್ನು ಜಾರಿಗೆ ತಾರದೆ ಬಲಗೈ ಸಮಾಜಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯ ಸರ್ಕಾರ ಬಲಗೈ ಸಮುದಾಯಕ್ಕೆ ಇಷ್ಟೊಂದು ಅನ್ಯಾಯ ಮಾಡಿದರೂ ಸಹ ಸಂಪುಟದಲ್ಲಿರುವ ಬಲಗೈ ಸಮೂದಾಯದ ಸಚಿವರುಗಳು ಮಲಗಿದ್ದಾರ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಬಲಗೈ ಸಮುದಾಯದ ಮುಖಂಡರಾದ ನವಿಲೂರು ಚನ್ನಪ್ಪ, ಈರಯ್ಯ, ಸಿ.ತಮ್ಮಣ್ಣಯ್ಯ, ಪಿ.ಪಿ.ಮಹದೇವ್, ಪಿ.ಪಿ.ಮಹದೇವ್, ಸಣ್ಣಯ್ಯ, ಬೆಮ್ಮತ್ತಿ ಚಂದ್ರು, ಈ ರಾಜ್ ಬಹುಜನ್, ಎವಿಎಸ್ಎಸ್ ವೆಂಕಟೇಶ್, ರೋಹಿತ್ ಕಂಪಲಾಪುರ, ಆವರ್ತಿ ಸೋಮಶೇಖರ್, ಚನ್ನಕಲ್ ಶೇಖರ್, ಶಿವರಾಜ್, ಗೋಪಾಲ, ಆರ್.ಡಿ.ಮಹದೇವ್, ರಾಜಯ್ಯ, ಕೆ.ಬಿ.ರಾಜು, ಚಾಮರಾಯನಕೋಟೆ ಪ್ರದೀಪ್, ಆಯಿತನಹಳ್ಳಿ ಮಂಜು, ಕಾಂತರಾಜು, ಚೆನ್ನಬಸವ, ಪಡ್ಡೆ ಮಹಾದೇವ್, ಶಿವಣ್ಣ, ಜಗದೀಶ್, ನಾಗ, ಶ್ಯಾಂ, ಹೇಮಂತ್ ಕುಮಾರ್, ಹೆಚ್.ಡಿ.ರಮೇಶ್, ಗಿರೀಶ್, ನವಿಲೂರು ಮಹದೇವ್, ಕಾಮರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Call Now Button