ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಮಾರ್ಚ್ 6ರಂದು) ತಮ್ಮ ಐತಿಹಾಸಿಕ 17ನೇ ಬಜೆಟ್ ಮಂಡಿಸುತ್ತಿರುವ ಹಿನ್ನಲ್ಲೆಯಲ್ಲಿ ತವರು ಜಿಲ್ಲೆ ಮೈಸೂರು ನಗರದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಿದ್ದರಾಮಯ್ಯ ಅವರು ಬೃಹತ್ ಕಲಾಚಿತ್ರ ರಚಿಸಿ ಅಭಿಮಾನ ಮರೆಯಲಾಗಿದೆ. ಡಾ. ಯತೀಂದ್ರ ಸಿದ್ದರಾಮಯ್ಯ ಯುವ ಬ್ರಿಗೆಡ್ ವತಿಯಿಂದ ಭುವನ್ ಫೌಂಡೇಷನ್‌ಯ ಕಲಾವಿದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪ್ರತಿಯ ಸೂಟ್‌ಕೇಸ್ ಹಿಡಿದಿರುವ ಹಾಗೂ ಹಿಂಬದಿಯಲ್ಲಿ ಕರ್ನಾಟಕದ ಮ್ಯಾಪ್ ಇರುವ ಬೃಹತ್ ಚಿತ್ರವನ್ನು ರಚಿಸಿ ಇಂದು ಅನಾವರಣಗೊಳಿಸಲಾಯಿತು.
ಸುಮಾರು 8000 ಚದುರ ಅಡಿಯಲ್ಲಿ ಸುಮಾರು 125 ಅಡಿ ಉದ್ದ ಹಾಗೂ 65 ಅಡಿ ಅಗಲದಲ್ಲಿ ಸಿದ್ದರಾಮಯ್ಯ ಅವರ ಚಿತ್ರವನ್ನು ರಚಿಸಲಾಗಿದ್ದು, ಇದಕ್ಕಾಗಿ ಸತತ 10 ಗಂಟೆಗಳ ಕಾಲ 5 ಮಂದಿ ಕಲಾವಿದರು ಶ್ರಮ ಹಾಕಿದ್ದಾರೆ. ಕಲಾವಿದರಾದ ಪುನೀತ್, ಲಕ್ಷ್ಮೀ. ಸಿ, ರವಿಚಂದ್ರನ್, ಸಂಜಯ್, ಕಂಸಾಳೆ ರವಿ ಅವರು ಈ ಚಿತ್ರಕಲೆಯನ್ನು ರಚಿಸಿದ್ದಾರೆ. ಈ ಚಿತ್ರಕಲೆಯನ್ನು ಉದ್ಘಾಡಿಸಲು ಡಾ. ಯತೀಂದ್ರ ಸಿದ್ದರಾಮಯ್ಯ ಆಗಮಿಸಬೇಕಾಗಿತ್ತು. ಇವರ ಅನುಪಸ್ಥಿತಿಯಲ್ಲಿ ಡಿಸಿಸಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್ ಮತ್ತು ಪದಾಧಿಕಾರಿಗಳು ಸಾಂಕೇತಿಕವಾಗಿ ಚಿತ್ರವನ್ನು ಅನಾವರಣಗೊಳಿಸಿದರು.


