Online News in ಕನ್ನಡ

ಕರ್ನಾಟಕ ಮುಕ್ತ ವಿವಿಯಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ: ವಿಸಿ ಹಲಸೆಯ ಹೊಲಸು ಕೃತ್ಯದ ವಿರುದ್ಧ ಪ್ರತಿಭಟನೆ

ಮೈಸೂರು: ವೈಚಾರಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಆರ್‌ಎಸ್‌ಎಸ್‌ ಪ್ರಾಯೋಜಕತ್ವದ ʻ ಏಕಾತ್ಮ ಮಾನವ ದರ್ಶನʼ ಹೆಸರಿನಡಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಿರುವುದು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.


ಮಾರ್ಚ್‌ 25 ಮತ್ತು 26ರಂದು ಎರಡು ದಿನಗಳ ಸಮ್ಮೇಳನವನ್ನು ನಡೆಸದಂತೆ ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ನೀಡಿದ್ದ ಸೂಚನೆಯನ್ನೂ ಧಿಕ್ಕರಿಸಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮತ್ತು ಕುಲ-ಸಚಿವ ನವೀನ್‌ಕುಮಾರ್‌ ಅವರು ಸರಕಾರದ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ. ಇವರಿಬ್ಬರನ್ನು ತಕ್ಷಣ ವಜಾಗೊಳಿಸಬೇಕೆಂಬ ಕೂಗು ಎಬ್ಬಿದೆ.
ಈ ಸಂಬಂಧ ಇಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ ಆವರಣದಲ್ಲಿ ದಲಿತ ಸಂರ್ಘಷ ಸಮಿತಿ, ಪ್ರಗತಿಪರ ಚಿಂತರಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮುಕ್ತ ವಿವಿಯ ಕುಲಪತಿ ಪ್ರೊ. ಹಲಸೆ ಅವರು ಕೋಮುವಾದಿ ಮನೋಭಾವವನ್ನು ಹೊಂದಿದ್ದು, ಮುಕ್ತ ವಿವಿಯನ್ನು ಆರ್‌ಎಸ್‌ಎಸ್‌ ಮತ್ತು ಮನುವಾದಿಗಳ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಕ್ರಮ ನೇಮಕಾತಿ, ನಕಲಿ ಅಂಕಪಟ್ಟಿ, ಅಕ್ರಮ ಕಾಮಗಾರಿಗಳನ್ನು ಕೈಗೊಂಡು ಭ್ರಷ್ಟಾಚಾರದಲ್ಲಿ ತೊಡಗಿರುವ ವಿಸಿ ಹಲಸೆ, ಇಡೀ ವಿವಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ಶೈಕ್ಷಣಿಕ ವಾತಾವರಣವನ್ನು ಮರೆ ಮಾಡಿ ರಾಜಕೀಯ ಪ್ರೇರಿತ ಮನುವಾದಿ ಪ್ರಚೋದಿತ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದರಿಂದ ವಿಶ್ವವಿದ್ಯಾನಿಲಯದ ಘನತೆಗೆ ಚ್ಯುತಿ ಬಂದಿದೆ ಎಂದು ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಇದ್ದಾಗಿಯೂ ಶಿಕ್ಷಣ ಇಲಾಖೆಯ ಸೂಚನೆಯನ್ನು ಧಿಕ್ಕರಿಸಿ ಆರ್‌ಎಸ್‌ಎಸ್‌ ಕಾರ್ಯಕ್ರಮ ನಡೆಸಿರುವ ಕುಲಪತಿ ಹಲಸೆಯನ್ನು ಸೇವೆಯಿಂದ ವಜಾಗೊಳಿಸಬೇಕು ಮತ್ತು ಶಿಷ್ಟಾಚಾರ ಉಲ್ಲಂಘಿಸಿ, ಹಲವು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಎಫ್‌ಐಆರ್‌ ದಾಖಲಿಸಬೇಕೆಂದು ಸರಕಾರವನ್ನು ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಮೈಸೂರು ವಿವಿ ಸಿಂಡಿಕೆಟ್‌ ಸದಸ್ಯ ನಟರಾಜ್‌ ಶಿವಣ್ಣ, ಬಿವಿಎಸ್‌ ಸಂಯೋಜಕ ಸೋಸಲೆ ಸಿದ್ದರಾಜು, ಆರ್ಟಿಸ್ಟ್‌ ನಾಗರಾಜು, ಸೋಮಯ್ಯ ಮಲೆಯೂರು, ಹರಿಹರ ಆನಂದಸ್ವಾಮಿ, ಸೋಮ ನಾಯ್ಕ, ಹೆಚ್.ಸಿ. ಪುಟ್ಟಣ್ಣ, ಹೊರಳವಾಡಿ ನಂಜುಂಡಸ್ವಾಮಿ, ಕಲ್ಲಹಳ್ಳಿ ಕುಮಾರ್‌ ಮೊದಲಾವರು ಭಾಗವಹಿಸಿದ್ದರು.

Call Now Button