ಮೈಸೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಇಂದು ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಇಸ್ಕಾನ್ ಸೇರಿ ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನೆರವೇರಿದವು. ಇದರೊಂದಿಗೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮoದಿರದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಎಂಎಲ್ ಸಿ ಸಿ.ಎನ್. ಮಂಜೇಗೌಡ, ಕೃಷ್ಣ ಇಡೀ ಮನುಕುಲದ ಮಾದರಿ ಹಾಗೂ ಸಮಾಜವನ್ನು ಮುನ್ನಡೆಸುವ ಸಾರಥಿಯಂತೆ. ಕೃಷ್ಣ ಯಾವಗಲೂ ನ್ಯಾಯದ ಪರವಾಗಿದ್ದವನು. ಧರ್ಮೋ ರಕ್ಷಿತೀ ರಕ್ಷಿತಃ. ಧರ್ಮವನ್ನು ಕಾಪಾಡಬೇಕು ಎಂದು ಭೋಧಿಸಿದವನು. ಕೃಷ್ಣ ಜನ್ಮಾಷ್ಠಮಿ ಭಾರತದಲ್ಲಿ ಎಲ್ಲರಿಗೂ ಪ್ರಮುಖವಾದ ಶ್ರೇಷ್ಠ ಹಬ್ಬವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಅವರು ಮಾತನಾಡಿ, ಕೃಷ್ಣ ಮಹಾ ಭಾರತದಲ್ಲಿ ತಿಳಿಸಿರುವಂತೆ ಜೀವನದಲ್ಲಿ ಯಾರೊಬ್ಬರು ಆತಂಕಕ್ಕೆ ಒಳಗಾಗದೇ, ಹತಾಶರಾಗದೇ, ಸೋತಿದ್ದೇವೆ ಎಂದು ಶರಣಾಗತರಾಗಬಾರದು ಧೃಡವಾಗಿ ನಿಲ್ಲಬೇಕು. ಎಲ್ಲಿ ಅಧರ್ಮ ನಡೆಯುತ್ತದೆಯೋ ಅಲ್ಲಿ ಕೃಷ್ಣ ಮತ್ತೆ ಹುಟ್ಟಿರುತ್ತಾನೆ. ಅಂದರೆ ಕೃಷ್ಣ ಬಿತ್ತಿದಂತಹ ಆದರ್ಶಗಳು, ಮಾರ್ಗಗಳ ಮೂಲಕ ಪ್ರತಿಯೊಬ್ಬರ ಜೀವನದಲ್ಲಿ ಮೊಳಕೆಯಾಗಿ ಸಸಿಯಂತೆ ಮೂಡುತ್ತವೆ. ಮಹಾಭಾರತವಿಲ್ಲದೇ, ಭಾರತವಿಲ್ಲ. ಕೃಷ್ಣ ನಿಲ್ಲದೇ, ಮಹಾಭಾರತವಿಲ್ಲ. ಮಹಾಭಾರತ ನಮ್ಮ ಭಾರತೀಯರ ಅಣು ಅಣುವಲ್ಲೂ ಬೆರೆತಿದೆ. ಕೃಷ್ಣ ಸಮಾಜದಲ್ಲಿ ಧರ್ಮತೀತವಾಗಿ, ಜಾತ್ಯಾತೀತವಾಗಿ ಬದುಕಿದ ಆದರ್ಶ ಪ್ರಾಯ ವ್ಯಕ್ತಿ. ಇಂತಹ ದೈವಿಕ ಶಕ್ತಿಯುಳ್ಳ ಕೃಷ್ಣ ಹುಟ್ಟಿದ ಭೂಮಿಯಲ್ಲಿ ನಾವು ಬದುಕುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಅಭಿಪ್ರಾಯಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಶೆಲ್ವ ಪಿಳ್ಳೆ ಅಯ್ಯಂಗಾರ್ ಅವರು ಮಾತನಾಡಿ, ಶ್ರೀಕೃಷ್ಣನನ್ನು ಪೂರ್ಣಾವತಾರ ಎಂದು ಪರಂಪರೆ ಒಕ್ಕಣಿಸಿದೆ. ಮನುಷಭಾವದ ಎಲ್ಲ ಭಾವಗಳ ಮೂರ್ತರೂಪವಾಗಿ ಅವನು ಕಾಣಿಸಿಕೊಂಡ ಮಾತ್ರವಲ್ಲ, ಆ ಎಲ್ಲ ಭಾವಗಳನ್ನೂ ಮೀರಿನಿಂತ ಕೂಡ. ಹೀಗಾಗಿಯೇ ಅವನು ಪೂರ್ಣಾವತಾರಿ. ಅವನು ಎಲ್ಲರ ಭಾವಗಳನ್ನೂ ಅರ್ಥಮಾಡಿಕೊಳ್ಳಬಲ್ಲ, ಅವನು ಎಲ್ಲರ ಸಮಸ್ಯೆಗಳಿಗೂ ಪರಿಹಾರವಾಗಿಯೂ ಒದಗಬಲ್ಲ. ಹೀಗಾಗಿಯೇ ಅವನು ಜಗದ್ಗುರು ಎಂದು ಹೇಳಿದರು.
ಶ್ರೀಕೃಷ್ಣನು ಗೀತೆಯನ್ನು ಉಪದೇಶಿಸಿದ್ದು ಕೇವಲ ಅರ್ಜುನನಿಗೆ ಮಾತ್ರವಲ್ಲ, ಅರ್ಜುನ ಅವನಿಗೆ ಒಂದು ನೆಪ ಅಷ್ಟೆ, ಅವನ ಉಪದೇಶದ ಉದ್ದೇಶ ಇಡೀ ಮನುಕುಲ. ನಮ್ಮ ಎಲ್ಲರ ಜೀವನದ ನೆಮ್ಮದಿಗೂ ಬೇಕಾದ ತಿಳಿವಳಿಕೆ ಗೀತೆಯಲ್ಲಿದೆ. ಶ್ರೀಕೃಷ್ಣನು ಎಲ್ಲರ ಸಮಸ್ಯೆಗೂ ಪರಿಹಾರವಾಗಬಲ್ಲ ಎಂಬುದೇ ಅವನ ವ್ಯಕ್ತಿತ್ವದ ವಿಶೇಷತೆ. ನಾವಿಂದು ಬದುಕುವುದಕ್ಕಾಗಿಯೇ ಹೋರಾಡುತ್ತಿದ್ದೇವೆ, ಹೊಡೆದಾಡುತ್ತಿದ್ದೇವೆ. ಆದರೆ ಗೀತೆ ನಮಗೆ ಚೆನ್ನಾಗಿ ಬದುಕುವ ದಾರಿಯನ್ನು ಕಾಣಿಸಿಕೊಡುತ್ತದೆ, ಮಾತ್ರವಲ್ಲ, ನೆಮ್ಮದಿಯಾಗಿಯೂ ಬದುಕುವ ಬಗೆಯನ್ನು ತಿಳಿಸಿಕೊಡುತ್ತದೆ. ಸಂಗ್ರಾಮದ ನಡುವೆ ತೋರಿಕೊಂಡ ಗೀತೆಗೆ ಜೀವನ ಸಂಗ್ರಾಮದ ಎಲ್ಲ ಪಟ್ಟುಗಳೂ ಗೊತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ್ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಪುಷ್ಪವಲ್ಲಿ, ಶ್ರೀ ಕೃಷ್ಣ ಜಯಂತೋತ್ಸವ ಸಮಿತಿಯ ಮುಖಂಡರಾದ ವೆಂಕಟಾಚಲಾ ಹಾಗೂ ಮತ್ತಿತರು ಉಪಸ್ಥಿತರಿದ್ದರು.


