ಬೆಂಗಳೂರು: ರಾಜ್ಯಪಾಲರು ಪೂರ್ತಿ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ “ಜೈ ಸಂವಿಧಾನ” ಎನ್ನುವುದನ್ನೂ ಉಲ್ಲೇಖಿಸದೆ, ಓದದೆ ಹೋದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದರು.
ಜಂಟಿ ಅಧಿವೇಶನದಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ನೀಡಿದ ಅವರು, ನಾವು ರಾಜ್ಯಪಾಲರ ವಿರುದ್ಧವಿಲ್ಲ. ಕೇಂದ್ರ ಸರಕಾರದ ವಿರುದ್ಧ ಇದ್ದೇವೆ. ಮನರೇಗಾ ಬದಲಾಯಿಸಿ ವಿಬಿ ಜೀ ರಾಮ್ ಜೀ ಎ ಎಂದು ಮಾಡಿದ್ದಾರೆ. ಇದರಲ್ಲಿ ರಾಮ, ದಶರಥ ರಾಮನೂ ಇಲ್ಲ, ಅಯೋಧ್ಯೆ ರಾಮನೂ ಇಲ್ಲ. ರಾಜ್ಯಪಾಲರು ಅವರು ಪೂರ್ಣ ಭಾಷಣವನ್ನು ಓದದೇ, ಮೊದಲನೇ ಹಾಗೂ ಕಡೆಯ ಜೈಹಿಂದ್ ಜೈಕರ್ನಾಟಕ ಎಂದು ಓದಿದರು, ಭಾಷಣದಲ್ಲಿ ಬರೆದುಕೊಡಲಾಗಿದ್ದ ‘ಜೈಸಂವಿಧಾನ’ವನ್ನು ಹೇಳಲಿಲ್ಲ. ರಾಷ್ಟ್ರಗೀತೆ ಮುಗಿಯುವವರೆಗೂ ರಾಜ್ಯಪಾಲರು ತೆರಳಬಹುದಿತ್ತು ಎಂದರು.
ಸಂವಿಧಾನ ಜಾರಿಯಾದ ದಿನದಿಂದ ಇವತ್ತಿವರೆಗೆ ಜಂಟಿ ಅಧಿವೇಶನಗಳು ನಡೆದುಕೊಂಡು ಬಂದಿವೆ. ಇದು ಸಂವಿಧಾನದ ಪ್ರಕಾರ ನಡೆದುಕೊಂಡು ಬರುತ್ತಿರುವ ಪದ್ಧತಿ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ “ನರೇಗ ಉದ್ಯೋಗ ಸಂಜೀವಿನಿ” ಎಂದು ಕರೆದಿದ್ದರು. ಈಗ ಬಿಜೆಪಿ ಜೊತೆ ಸೇರಿ ನರೇಗಾ ವಿರೋಧಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ರಾಜ್ಯಪಾಲರ ಭಾಷಣದ ಮೇಲೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ 15 ಜನ ಸದಸ್ಯರು ಮಾತನಾಡಿದ್ದಾರೆ. ಕಾಂಗ್ರೆಸ್ ನ ವಂದನಾ ನಿರ್ಣಯ ಮಂಡಿಸಿದ ಪೊನ್ನಣ್ಣ, ಮತ್ತು ಪ್ರದೀಪ್ ಈಶ್ವರ್ ರವರು ಅನುಮೋದನೆ ಮಾಡಿದ್ದಾರೆ. ಸುಮಾರು 9 ಜನ ಮಾತನಾಡಿದ್ದು, ಜೆಡಿಎಸ್ ನಿಂದ ಸುರೇಶ್ ಬಾಬುರವರು ಮತ್ತು ಪಕ್ಷೇತರರಲ್ಲಿ ಇಬ್ಬರು ಸೇರಿದಂತೆ ಒಟ್ಟು 27 ಜನ ಮಾತನಾಡಿದ್ದಾರೆ. ಕಾಂಗ್ರೆಸ್ 5 ಗಂಟೆ 18 , ಬಿಜೆಪಿಯವರು 8 ಗಂಟೆ 53 ನಿ , ಜೆಡಿಎಸ್ ನವರು 12 ನಿಮಿಷ ಮತ್ತು ಪಕ್ಷೇತರರು 54 ನಿಮಷ ಮಾತನಾಡಿದ್ದು, ಹೀಗೆ ಒಟ್ಟು 15 ಗಂಟೆ 17 ನಿಮಿಷ ಚರ್ಚೆ ನಡೆದಿದೆ.
ಶಾಸಕ ಸುನಿಲ್ ಕುಮಾರ್ ಅವರು ‘ಸರ್ಕಾರ ಆಡಳಿತ ಹದಗೆಟ್ಟಿದೆ ಮತ್ತು ಸಂವಿಧಾನರಹಿತ ಸರ್ಕಾರ’ , ‘ಅಸಹಾಯಕ ಮುಖ್ಯಮಂತ್ರಿ’ ಎಂದಿದ್ದಾರೆ. ಕೆಲವೊಮ್ಮ ಅಸತ್ಯದ ಎದುರು ಸತ್ಯ ಅಸಹಾಯಕವಾಗುತ್ತದೆ. ಜನರು ನಮ್ಮನ್ನು ಅವರ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ. ವಿರೋಧಪಕ್ಷದವರ ಮತ್ತು ಸರ್ಕಾರದವರ ಸಿದ್ಧಾಂತಗಳು ವಿಭಿನ್ನವಾಗಿರುತ್ತವೆ. ನಾವಿಬ್ಬರೂ ಪರಸ್ಪರ ಒಪ್ಪಲೇಬೇಕೆಂಬ ಷರತ್ತಿಲ್ಲ. ಆದರೆ ನಾವೆಲ್ಲರೂ ಸಂವಿಧಾನ ಒಪ್ಪಲೇಬೇಕು ಎಂದು ತಿಳಿಸಿದರು.

