ತಿ. ನರಸೀಪುರ : ಪಟ್ಟಣದ ಐತಿಹಾಸಿಕ ಸಿಲ್ಕ್ ಪ್ಯಾಕ್ಟರಿಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟ ಎಚ್ಚರಿಕೆ ನೀಡಿದರು.
ಶಿಲ್ಕ್ ಪ್ಯಾಕ್ಟರಿ ಉಳಿವಿಗಾಗಿ ಸಿಬ್ಬಂದಿಗಳು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 1912ರಲ್ಲಿ ಮೈಸೂರು ಸಂಸ್ಥಾನದ ಆಡಳಿತಾವಧಿಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರ ದೂರದೃಷ್ಟಿಯಿಂದ ಈ ಕಾರ್ಖಾನೆ ಸ್ಥಾಪಿತವಾಗಿದೆ ಎಂದು ಹೇಳಿದರು. “ಇಲ್ಲಿನ ಜನರ ಬದುಕಿಗೆ ಆಧಾರವಾದ ಈ ಪಾರಂಪರಿಕ ಕಾರ್ಖಾನೆಯನ್ನು ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ,” ಎಂದರು.

ಕಾರ್ಖಾನೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, “ಮರಗಿಡಗಳನ್ನು ಕಡಿದು ಪರಿಸರ ಹಾನಿ ಮಾಡುವ ಬದಲು ಯೋಗ್ಯವಾದ ಬೇರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಿ. ಶಿಲ್ಕ್ ಪ್ಯಾಕ್ಟರಿ ಜಾಗವನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ,” ಎಂದು ಎಚ್ಚರಿಸಿದರು.
ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, “ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮೈಸೂರಿನ ಆಸ್ತಿಯ ರಕ್ಷಣೆಗೆ ನಾವು ಒಂದಾಗಿ ಹೋರಾಟ ಮಾಡುತ್ತೇವೆ,” ಎಂದು ಹೇಳಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, “ಕ್ರೀಡಾಂಗಣ ಅಗತ್ಯವೇ ಸರಿ. ಆದರೆ ಅದು ವೈಜ್ಞಾನಿಕವಾಗಿ ಸೂಕ್ತ ಜಾಗದಲ್ಲಿರಬೇಕು. ಒಂದು ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಕನಿಷ್ಠ 11 ಎಕರೆ ಅಗತ್ಯವಿದೆ. ಐದು ಎಕರೆ ಜಾಗದಲ್ಲಿ ಅದನ್ನು ನಿರ್ಮಿಸುವುದು ಸಾಧ್ಯವಿಲ್ಲ,” ಎಂದು ಅಭಿಪ್ರಾಯಪಟ್ಟರು.
ನೂರಾರು ಕಾರ್ಮಿಕರ ಬದುಕಿಗೆ ಹೊಡೆತ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದ ಅವರು, “ಪ್ರತಿ ದಿನ ಸುಮಾರು ಸಾವಿರ ಮೈಸೂರು ಶಿಲ್ಕ್ ಸೀರೆಗಳಿಗೆ ಬೇಡಿಕೆ ಇದೆ. ಆದರೆ ಉತ್ಪಾದನೆ ನೂರು ಸೀರೆಗಳಷ್ಟೇ. ಮೈಸೂರು ಶಿಲ್ಕ್ ತನ್ನ ಗುಣಮಟ್ಟದಿಂದ ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಆಗಿದೆ. ಇಂತಹ ಸಂದರ್ಭದಲ್ಲಿ ಕಾರ್ಖಾನೆಯನ್ನು ಮುಚ್ಚುವ ಯತ್ನ ನ್ಯಾಯಸಮ್ಮತವಲ್ಲ,” ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯನ್ನು ಉಲ್ಲೇಖಿಸಿ, “ದೀರ್ಘ ರಾಜಕೀಯ ಜೀವನದಲ್ಲಿಯೂ ಮೈಸೂರಿಗೆ ನೀಡಿದ ಸ್ಪಷ್ಟ ಕೊಡುಗೆ ಏನು?” ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿಸಂಸದ ಪ್ರತಾಪ್ ಸಿಂಹ, ಬಿಜೆಪಿ ಮುಖಂಡರಾದ ಡಾ. ರೇವಣ್ಣ, ಟಿ. ನರಸಿಂಹ, ಮಂಡಲ ಅಧ್ಯಕ್ಷ ಸತ್ಯರಾಜ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ಮೆಡಿಕಲ್ ಕುಮಾರ್, ಮಾಜಿ ಪುರಸಭಾ ಸದಸ್ಯರಾದ ಕಿರಣ್, ಅರ್ಜುನ್, ಚೌಹಳ್ಳಿ ಸಿದ್ದರಾಜು, ನಿಲಸೋಗೆ ಬಸವರಾಜು ಹಾಜರಿದ್ದರು.

