Online News in ಕನ್ನಡ

ರಂಗಭೂಮಿಯಲ್ಲಿ ಕೌಶಲ್ಯ ವೃದ್ಧಿಗೆ ಅವಕಾಶವಿದೆ : ಮಹಿಳಾ ರಂಗ ತರಬೇತಿ ಶಿಬಿರದಲ್ಲಿ ಪತ್ರಕರ್ತ ಕೆ.ದೀಪಕ್

ಮಹಾರಾಣಿ ಮಹಿಳಾಕಾಲೇಜಿನಲ್ಲಿ ಮಹಿಳಾ ರಂಗ ತರಬೇತಿ ಶಿಬಿರ
ಮೈಸೂರು: ಪ್ರಸ್ತುತ ಯುವ ಸಮ್ಮೂಹ ಸಹಜ, ಸ್ಪರ್ಧಾತ್ಮಕ ಮತ್ತು ಡಿಜಿಟಲ್‌ ಜಗತ್ತಿನೊಂದಿಗೆ ಹೋರಾಡಬೇಕಿದ್ದು, ಶೈಕ್ಷಣಿಕ ಜ್ಞಾನದ ಜೊತೆಗೆ ಕೌಶಲ್ಯ ವೃದ್ಧಿಗೂ ಆಧ್ಯತೆ ನೀಡಬೇಕಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್‌ ಕರೆ ನೀಡಿದರು.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿಂದು ಮೈಸೂರಿನ ರಂಗಾಂತರಂ ಸಂಸ್ಥೆಯ ವತಿಯಿಂದ ನಡೆದ ಮಹಿಳಾ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ರಂಗಭೂಮಿಯಲ್ಲಿ ಕೌಶಲ್ಯ ವೃದ್ಧಿಗೆ ಅವಕಾಶ ಹೆಚ್ಚಿದ್ದು ಯುವಕರು ರಂಗ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಕಿವಿಮಾತು ಹೇಳಿದರು.


30-40 ವರ್ಷಗಳ ಹಿಂದಿನ ಸಹಜ ಜಗತ್ತಿನಲ್ಲಿ ನಾಲ್ಕು ಅಕ್ಷರ ಕಲಿತರ ಜೀವನ ಕಟ್ಟಿಕೊಳ್ಳಬಹುದು ಎಂದು ಭಾವಿಸಲಾಗಿತ್ತು. ತದನಂತರದಲ್ಲಿ ಸ್ಪರ್ಧಾತ್ಮಕ ಜಗತ್ತು ಸೃಷ್ಟಿಯಾಗಿ ನಾವು ಸ್ಪರ್ಧೆಯನ್ನು ಎದುರಿಸಬೇಕಾಗಿದ್ದು, ಇದೀಗ ಡಿಜಿಟಲ್‌ ಜಗತ್ತು ತೆರೆದುಕೊಂಡು ನಾನು ಕೌಶಲ್ಯವನ್ನೂ ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಕಾಲವೊಂದಿತ್ತು. ಹೆಣ್ಣು ಹುಟ್ಟಿದರೆ ಪೋಷಕರು ಕಣ್ಣೀರು ಹಾಕುತ್ತಿದ್ದರು. ಆದರೆ, ಇಂದು ಹೆಣ್ಣು ಸಿಗುತ್ತಿಲ್ಲ ಎಂದು ಗಂಡು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ನಮ್ಮಲ್ಲಿರುವ ಮೌಡ್ಯ ಮತ್ತು ಲಿಂಗ ತಾರತಮ್ಯವೇ ಕಾರಣ. ಹಾಗಾಗಿ, ಹೆಣ್ಣು ಮಕ್ಕಳು ಕ್ಷಣಿಕ ಮತ್ತು ಆಕರ್ಷಕ ಜಗತ್ತಿಗೆ ಮನಸೋಲದೆ ತಮ್ಮ ಧ್ಯೇಯ ಮತ್ತು ಉದ್ದೇಶಗಳ ಬೆನ್ನು ಹತ್ತಬೇಕೆಂದು ಕಿವಿಮಾತು ಹೇಳಿದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ರಂಗ ನಿರ್ದೇಶಕಿ ಕೆ.ಆರ್.‌ ಸಮತಿ, ಭಾರತದ ಧರ್ಮ ಮತ್ತು ಕಾನೂನುಗಳು ಹೆಣ್ಣನ್ನು ಹತ್ತಿಕ್ಕುವ ಮತ್ತು ಶೋಷಿಸುವುದಕ್ಕಾಗಿಯೇ ಬಂದಂತ್ತಿದೆ. ಇದನ್ನು ಮೆಟ್ಟಿನಿಂತು ತಮ್ಮಲ್ಲಿರುವ ಕಲಾ ಪ್ರತಿಭೆಯ ಮೂಲಕ ತಮ್ಮನ್ನು ತಾವು ಅಭಿವ್ಯಕ್ತ ಪಡಿಸಿಕೊಳ್ಳಬೇಕೆಂದರು. ಅಂಕಣಕಾರ ನಾ. ದಿವಾಕರ್‌ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಿತಾ ಎಂ.ಎಸ್.‌, ರಂಗಾಂತರಂಗ ನಿರ್ದೇಶಕ ಕೆ.ಎಂ. ಕೀರ್ತಿರಾಜ್‌, ನಾಟಕಗಾರ ವೆಂಕಟೇಶ ಈಡಿಗರ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಭಾಸ್ಕರ್‌ ಕೆ.ಎಸ್.,ಸಹ ಪ್ರಾಧ್ಯಾಪಕರಾದ ಡಾ. ನಾಗವೇಣಿ ಹಾಜರಿದ್ದರು.

Call Now Button