Online News in ಕನ್ನಡ

ಸಿಎಂ ತೆಗಿಬೇಕು ಅಂತ ಕೇಳಿಕೊಂಡವರಿಗೆ ಮನ್ನಣೆ ಕೊಟ್ಟಿಲ್ಲ : ಇದರ ಅರ್ಥ ಹೇಳಿದ ಡಾ. ಯತೀಂದ್ರ

ಸಿಎಂ ಬದಲಾವಣೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದ ಡಾ. ಯತೀಂದ್ರ ಸಿದ್ದರಾಮಯ್ಯ
ಮೈಸೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕುಗ್ಗಿದ ಬೆನ್ನ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕಳೆದ ನವೆಂಬರ್‌ ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ʻಈಗ ಇದು ಸೆಟ್ಲಡ್‌ ವಿಚಾರʼ ಎಂದು ಹೇಳಿವ ಮೂಲಕ ಕಾಂಗ್ರೆಸ್‌ ಪಕ್ಷದೊಳಗಿನ ಬಿಕ್ಕಟ್ಟು ಬಗೆಹರಿದಿದೆ ಎಂದು ತಿಳಿಸಿದ್ದಾರೆ.
ಮೈಸೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೋ ಕೆಲವರು ನಾಯಕತ್ವ ಬದಲಾವಣೆ ಬಗ್ಗೆ ಪ್ರಯತ್ನ ಮಾಡಿದ್ದರು. ಆ ಪ್ರಯತ್ನಕ್ಕೆ ಹೈ ಕಮಾಂಡ್‌ ಸೊಪ್ಪು ಹಾಕಿಲ್ಲ. ಅಲ್ಲಿಗೆ ನನ್ನ ಪ್ರಕಾರ ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸುತ್ತಾರೆ. ಪಕ್ಷದಲ್ಲಿ ಈಗ ಎಲ್ಲೂ ಸಿಎಂ ಅವರನ್ನ ತೆಗೀಬೇಕು, ತೆಗೀಬಾರದು ಎಂದು ಯಾರೂ ಎಲ್ಲೂ ಹೇಳುತ್ತಿಲ್ಲ. ಇದನ್ನು ನೀವು (ಮಾಧ್ಯಮ) ಮಾತ್ರ ಚರ್ಚೆ ಮಾಡುತ್ತಿದ್ದೀರಿ ಎಂದು ನುಡಿದರು.
ಮುಡಾ 50:50 ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೂರುದಾರರು ಮೇಲ್ಮನವಿ ಹೋಗುತ್ತೇವೆ ಎಂದು ಹೇಳಿದ್ದಾರೆ. ಆ ಪ್ರಕ್ರಿಯೆ ಮುಗಿಯಲಿ. ಆನಂತರ ಸೈಟ್‌ ವಾಪಸ್‌ ಪಡೆಯುವ ಬಗ್ಗೆ ನಮ್ಮ ತಾಯಿ ತೀರ್ಮಾನಿಸುತ್ತಾರೆ. ಈಗ ಸದ್ಯಕ್ಕಂತು ಆ ವಿಚಾರವನ್ನು ನಾವು ಚರ್ಚೆ ಮಾಡಿಲ್ಲ. ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಬಾಕಿ ಇದೆ. ಸದ್ಯಕ್ಕೆ ಪ್ರಕರಣದಿಂದ ನಮ್ಮ ತಾಯಿ ಮುಕ್ತರಾಗಿರುವುದು ಸಂತೋಷ ತಂದಿದೆ ಎಂದು ನುಡಿದರು.
ಜಾರ್ಜ್‌ ವಿಷಯಕ್ಕೆ ಹೋಗಿಲ್ಲ:
ಸಚಿವ ಕೆ.ಜೆ. ಜಾರ್ಜ್‌ ವಿಷಯಕ್ಕೆ ಸಂಬಂಧಿಸಿದಂತೆ ನಾನು ಯಾವತ್ತೂ ಜಾರ್ಜ್‌ ಅವರ ಮತ್ತು ಅವರ ಇಲಾಖೆ ವಿಷಯದಲ್ಲಿ ಯಾವುದೇ ಚರ್ಚೆ ಮಾಡಿಲ್ಲ. ಸುಖಾಸುಮ್ಮನೆ ಈ ಬಿಜೆಪಿಯವರು ನನ್ನ ಹೆಸರನ್ನು ಎಲ್ಲದಕ್ಕೂ ಮುನ್ನಲೆಗೆ ತರುತ್ತಾರೆ. ನನ್ನ ತಂದೆಯನ್ನು ಟಾರ್ಗೆಟ್‌ ಮಾಡಲು ಸಾಧ್ಯವಾಗದೆ, ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಜಾರ್ಜ್‌ ವಿಚಾರದಲ್ಲಿ ಆಗಿರೋದು ಇದೆ. ಆ ಬಗ್ಗೆ ಅವರೇ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿಸಿದರು.
ಗ್ರಾಪಂ ಚುನಾವಣೆಗೆ ಬ್ಯಾಲೆಟ್‌ ಪೇಪರ್‌
ಮೈಸೂರು: ದೇಶ ವ್ಯಾಪ್ತಿ ಚುನಾವಣಾ ಅಕ್ರಮ ಮತ್ತು ಮತ ಯಂತ್ರಗಳ ದುರ್ಬಳಕೆ ವಿರುದ್ಧ ಹೋರಾಟ ನಡೆಸುತ್ತಿರುವ ಕಾಂಗ್ರೆಸ್‌ ಕರ್ನಾಟಕದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಇವಿಎಂ ಯಂತ್ರಗಳ ಬದಲಿಗೆ ಹಳೇ ಪದ್ಧತಿಯಂತೆ ಬ್ಯಾಲೆಟ್‌ ಪೇಪರ್‌ ಬಳಸಲು ಮುಂದಾಗಿದೆ.
ಈ ವಿಷಯವನ್ನು ತಿಳಿಸಿದ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ, ಎಲ್ಲ ಚುನಾವಣೆಗಳೂ ಮತಪತ್ರದ ಮೂಲಕವೇ ನಡೆಯಬೇಕು. ಏಕೆಂದರೆ ಇವಿಎಂ ಯಂತ್ರಗಳಲ್ಲಿ ದೋಷಗಳಿವೆ. ಹಾಗೂ ಇವಿಎಂ ಯಂತ್ರಗಳನ್ನು ಹ್ಯಾಕ್‌ ಮಾಡಬಹುದಾಗಿದೆ. ಆದ್ದರಿಂದ ಮುಂದಿನ ಗ್ರಾಮ ಪಂಚಾಯ್ತಿ ಚುನಾವಣೆಗಳಿಗೆ ಬ್ಯಾಲೆಟ್‌ ಪೇಪರ್‌ ಬಳಸಲು ಸರಕಾರ ನಿರ್ಧರಿಸಿದೆ ಎಂದರು.
ಮುಂದೆ, ವಿಧಾನಸಭಾ ಚುನಾವಣೆಯಲ್ಲೂ ಇವಿಎಂ ಯಂತ್ರ ಬಳಕೆ ರದ್ದಾಗಿ, ಬ್ಯಾಲೆಂಟ್‌ ಪೇಪರ್‌ ಬರಬೇಕೆಂದು ಒತ್ತಾಯಿಸಿದರು.

Call Now Button