ಮೈಸೂರು: ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ ಅವರಿಗೆ ಪ್ರತಿಷ್ಠಿತ ಕರ್ನಾಟಕ ಛಾಯಾ ರತ್ನ ಪ್ರಶಸ್ತಿ ಲಭಿಸಿದೆ. ತಮ್ಮ 45 ವರ್ಷಗಳ ಛಾಯಾಗ್ರಾಹಕ ವೃತ್ತಿಗೆ ಈ ಗೌರವ ಸಂದಿದೆ.
ಮೈಸೂರಿನ ಸರ್ವ ಪತ್ರಿಕೆಗಳ ಛಾಯಾಗ್ರಾಹಕರಾಗಿರುವ ಪ್ರಗತಿ ಗೋಪಾಲಕೃಷ್ಣ ಅವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಮೈಸೂರು ಡಿಸ್ಟ್ರಿಕ್ಟ್ ಫೋಟೋಪ್ರಫರ್ಸ್ ಅಸೋಶಿಯೇಷನ್ನ ಅಧ್ಯಕ್ಷರಾಗಿದ್ದಾರೆ.
ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಪ್ರತಿಷ್ಠಿತ ಪತ್ರಿಕೆಗಳಿಗೆ ತಮ್ಮ ವಿಶಿಷ್ಟ ಛಾಯಾಚಿತ್ರಗಳನ್ನು ನೀಡಿರುವ ಪ್ರಗತಿ ಗೋಪಾಲಕೃಷ್ಣ, ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಫೋಟೋಗ್ರಫಿಯನ್ನೇ ನಂಬಿಕೊಂಡು ಮುಂದೆ ಬಂದವರು. ಜೂನ್ 12ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಛಾಯಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಇತ್ತೀಚೆಗೆ ಅವರಿಗ ಜಿಲ್ಲಾ ಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಲಭಿಸಿದೆ. ನಾಲ್ವಡಿ ಪ್ರಶಸ್ತಿ ಮತ್ತು ಛಾಯಾರತ್ನ ಪ್ರಶಸ್ತಿಗೆ ಭಾಜನರಾದ ಪ್ರಗತಿ ಗೋಪಾಲಕೃಷ್ಣ ಅವರಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


