Online News in ಕನ್ನಡ

ವರುಣಾ ಮಾದರಿ ಕ್ಷೇತ್ರ ಮಾಡುತ್ತೇವೆ : ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು : ವರುಣಾ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಡಿಸುವುದರ ಮೂಲಕ ಮಾದರಿ ಕ್ಷೇತ್ರ ಮಾಡಲು ಶ್ರಮಿಸುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ಕುಂಬ್ರಳ್ಳಿಮಠ ಗ್ರಾಮದ ಶಾಲೆಯಲ್ಲಿ ಐ.ಟಿ.ಸಿ. ಕಂಪೆನಿಯ ವತಿಯಿಂದ ನಡೆದ ಸಮುದಾಯ ಅಭಿವೃದ್ಧಿ ಸಮಾರಂಭದಲ್ಲಿ ಕಲಿಕಾ ಸಾಮಗ್ರಿ ವಿತರಿಸಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ನವೀಕರಣಗೊಂಡ ಆಸ್ಪತ್ರೆಗಳು ಹಾಗೂ ಅಂಗನವಾಡಿಗಳನ್ನು ಕೀ ಕೊಡುವ ಮೂಲಕ ಹಸ್ತಾಂತರಿಸಿ ಮಾತನಾಡಿದ ಅವರು ಐಟಿಸಿ ಕಂಪನಿಯವರು ಬಹಳ ಪ್ರಾಮಾಣಿಕತೆಯಿಂದ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. 59 ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿದ್ದಾರೆ. 38 ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ. 6 ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ 1050 ನಿರಾಶ್ರಿತ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಾಯ ಮಾಡಿದ್ದಾರೆ. ನಿಮ್ಮ ಸೇವೆ ಸಮಾಜಕ್ಕೆ ನಿರಂತರವಾಗಿರಲಿ ಎಂದು ಐಟಿಸಿ ಕಂಪನಿಯವರಿಗೆ ಧನ್ಯವಾದ ಸಲ್ಲಿಸಿದರು. ವರುಣಾ ಕ್ಷೇತ್ರ ಮುಖ್ಯಮಂತ್ರಿಗಳ ಕ್ಷೇತ್ರವಾಗಿರುವುದರಿಂದ ಕ್ಷೇತ್ರದ ಯಾವುದೇ ಶಾಲೆಯಲ್ಲಿ ಕೊಠಡಿಗಳ ಕೊರತೆ ಇರಬಾರದೆಂದು ಸಿಎಸ್‍ಆರ್ ಫಂಡ್ ಹಾಕಿ ಅಭಿವೃದ್ಧಿ ಮಾಡಿದ್ದೇವೆ. ಈ ಶಾಲೆಗೂ ಎಲ್ಲಾ ಮೂಲಭೂತ ಸೌಲಭ್ಯವನ್ನು ಸರ್ಕಾರದಿಂದ ಮಾಡಿದ್ದೇವೆ. ಕುಂಬ್ರಳ್ಳಿಮಠದ ಜನರು ಯಾವಾಗಲೂ ನಮಗೆ ಆಶೀರ್ವಾದ ಮಾಡಿಕೊಂಡು ಬಂದಿದ್ದೀರಿ. ಮುಂದೆಯೂ ನಿಮ್ಮೆಲ್ಲರ ಆಶೀರ್ವಾದ ಸಿದ್ದರಾಮಯ್ಯರವರು ಹಾಗೂ ನನ್ನ ಮೇಲೆ ಇರಲಿ ಎಂದರು.
ಸಮಾರಂಭದಲ್ಲಿ ಐಟಿಸಿ ಕಂಪನಿಯ ಮುಖ್ಯ ವ್ಯವಸ್ಥಾಪಕ ರಾಕೇಶ್ ಕೆ., ಹಿರಿಯ ವ್ಯವಸ್ಥಾಪಕ ಹರೀಶ್‍ಬಾಬು, ಮನೋಜ್ ಎಂ., ಡಿಹೆಚ್‍ಓ ಕುಮಾರಸ್ವಾಮಿ, ಬಿಇಓ ಪ್ರಕಾಶ್, ಮುಖ್ಯಶಿಕ್ಷಕಿ ಅನಿತಾ ಎಂ.ಎಸ್., ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಶಿವಸ್ವಾಮಿ, ಪ್ರದೀಪ್‍ಕುಮಾರ್, ನಾಗರಾಜು, ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಾದೇವ್, ರಾಯನಹುಂಡಿ ರವಿ, ಡಾ. ಅರುಣ್‍ಕುಮಾರ್, ಡಾ. ಸುಜಾತ, ಸಿಡಿಪಿಓ ತಿಬ್ಬಯ್ಯ, ಮಾಕನಹುಂಡಿ ಶಿವು, ಹದಿನಾರು ಅಭಿ, ಶಿವರಾಂ, ಪುಟ್ಟರಾಜು, ಪುಟ್ಟಮಾದಯ್ಯ, ಶಿವು, ಸುರೇಶ್ ಹಾಜರಿದ್ದರು.

Call Now Button