ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಿಸಬೇಕಾದಲ್ಲಿ ಮೊದಲು ಹೈಕಮಾಂಡ್ ನೈಜ ಕಾರಣವನ್ನು ನೀಡಲಿ. ಅವರೇನು ಭ್ರಷ್ಟಾಚಾರ ಮಾಡಿದ್ದಾರಾ ? ಅಸಮರ್ಥರಾ ? ಎಂದು ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಪ್ರಶ್ನಿಸಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಮುಖ್ಯಮಂತ್ರಿ ಮಾಡಲು ಓಟ್ ಹಾಕಿದ್ದೀವಿ. ಅದರ ಅರ್ಥ ಅವರು 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದೇ ವಿನಃ ಅರ್ಧ ಅವಧಿ ಇವರು, ಮತ್ತರ್ಧ ಅವಧಿಮತ್ತೊಬ್ಬರು ಎಂದಲ್ಲ. ಒಂದು ವೇಳೆ ಅಧಿಕಾರ ಹಂಚಿಕೆ ಒಪ್ಪಂದ ಆಗಿದ್ದರೆ ನಮಗೇಕೆ ಹೇಳಿಲ್ಲ ಎಂದು ಮತ್ತೆ ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಅವರನ್ನು ಬದಲಿಸಿದರೆ ಮುಖ್ಯಮಂತ್ರಿ ಆಗುವ ಅರ್ಹ ಹಿರಿಯ ನಾಯಕರು ಬಹಳಷ್ಟು ಮಂದಿ ಇದ್ದಾರೆ. ನಾನು ಡಿ.ಕೆ.ಶಿವಕುಮಾರ್‍ಗಿಂತ ಮೊದಲು ಶಾಸಕನಾದವರು. ನಾನೂ ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹನಿದ್ದೇನೆ. ನಮ್ಮಲ್ಲಿ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಅಂತಹ ಹಿರಿಯ ನಾಯಕರಿದ್ದಾರೆ.
ಅಷ್ಟಕ್ಕೂ ಡಿ.ಕೆ.ಶಿವಕುಮಾರ್ ಅವರು ನನಗೆ ಮುಖ್ಯಮಂತ್ರಿ ಮಾಡಿ ಎಂದು ಯಾರನ್ನೂ ಕೇಳಿಲ್ಲ. ಅವರ ಕೆಲ ಅಭಿಮಾನಿ ಶಾಸಕರು ಮುಖ್ಯಮಂತ್ರಿ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಏನೂ ತಪ್ಪಿಲ್ಲ. ಅದನ್ನೇ ದೊಡ್ಡು ಮಾಡಿಕೊಂಡು ಸಿದ್ದರಾಮಯ್ಯ ಅವರನ್ನು ಬದಲಿಸುವುದು ಸೂಕ್ತವಲ್ಲ. ನಮ್ಮ ಹೈಕಮಾಂಡ್ ಶಕ್ತಿಶಾಲಿಯಾಗಿದ್ದು, ಒಂದೆರಡು ದಿನಗಳಲ್ಲಿ ಸಮಸ್ಯೆ ಪರಿಹಾರ ಕಂಡುಕೊಳ್ಳಲಿದೆ.
ಸರಕಾರ ಸುಗಮವಾಗಿ ನಡೆಯುವ ಸಂದರ್ಭದಲ್ಲಿ ಇಂತಃ ಘಟನೆ ನಡೆಯಬಾರದಿತ್ತು ಎಂದಿದ್ದಾರೆ.


