Online News in ಕನ್ನಡ

ಮಹಿಳಾ ಮೀಸಲಾತಿ: ಬಿಜೆಪಿ ಕಪಟ ನಾಟಕ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಮೈಸೂರು: ಮಹಿಳಾ ಮೀಸಲಾತಿ ಕೂಡಲೇ ಜಾರಿಗೊಳಸಬೇಕೆಂದು ಆಗ್ರಹಿಸಿ ನಗರದಲ್ಲಿ ಗ್ರಾಮಾಂತರ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಇಂದಿರಾಗಾಂಧಿ ಕಾಂಗ್ರೆಸ್‌ ಭವನದ ಎದುರು ಜಮಾವಣೆಗೊಂಡ ಮಹಿಳಾ ಕಾರ್ಯಕರ್ತೆಯರು ಸುಳ್ಳುಗಾರ ಪ್ರಧಾನಿಗೆ ಧಿಕ್ಕಾರ, ಬಿಜೆಪಿಯ ಕಪಟ ನಾಟಕಕ್ಕೆ ಧಿಕ್ಕಾರ ಎಂಬಿತ್ಯಾದಿ ನಾಮಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಮಾತನಾಡಿ, ಶೇ.೩೩ರಷ್ಟು ಮೀಸಲಾತಿಯನ್ನು ೨೦೧೦ರಲ್ಲಿ ಯುಪಿಎ ಸರ್ಕಾರ ಅಂದೇ ಬಿಲ್‌ ಪಾಸ್‌ ಮಾಡಿ ಅನೇಕ ಅಡೆತಡೆಗಳಿಂದ ಹಾಗೇ ಉಳಿದಿತ್ತು. ೨೦೨೩ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ ಅಂದೂ ಸಹ ಬಿಜೆಪಿ ಜಾರಿಗೆ ತಂದಿಲ್ಲ. ಈಗ ಚುನಾವಣಾ ಕಾರಣಕ್ಕಾಗಿ ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದರಿಂದ ಕಾಂಗ್ರೆಸ್‌ ಮೀಸಲಾತಿ ಜಾರಿಗೆ ವಿರೋಧ ಮಾಡಿದೆ ಎಂದರು.
ಮಾತ್ರವಲ್ಲದೆ, ಕೇವಲ ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದರೆ ಸ್ವಾಗತಿಸುತ್ತಿದ್ದೇವು. ಆದರೆ, ಬಿಜೆಪಿ ಲೋಕಸಭಾ ಕ್ಷೇತ್ರ ಪುನರ್‌ ವಿಂಗಡಣೆಗೆ ಮುಂದಾಗಿದೆ. ಇದರಿಂದ ಉತ್ತರ ಭಾರತದಲ್ಲಿ ಎಂದಿನಂತೆ ಹೆಚ್ಚಿನ ಕ್ಷೇತ್ರಗಳು ಮಾರ್ಪಾಡಾಗಿ ದಕ್ಷಿಣ ಭಾರತಕ್ಕೆ ಭಾರೀ ಅನ್ಯಾಯ ಆಗಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಮರು ವಿಂಗಡಣೆಗೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಜತೆಗೆ ಒಬಿಸಿ ಮಹಿಳಾ ಮೀಸಲಾತಿ ಪ್ರತ್ಯೇಕ ಮೀಸಲಾತಿ ಆಗಬೇಕು. ಜನಗಣತಿ ನಂತರ ಲೋಕಸಭಾ ಕ್ಷೇತ್ರ ಪುನರ್‌ ವಿಂಗಡಣೆ ಆಗಬೇಕಿದೆ. ಇದೆಲ್ಲವನ್ನು ಮರೆಮಾಚಿ ಬಿಜೆಪಿ ಇದರಲ್ಲೂ ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟಿಸುತ್ತಿರುವುದಾಗಿ ಹೇಳಿದರು.
ಮೈಸೂರು ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್‌ ಡಿ.ಪ್ರೇಮಾ ಮಾತನಾಡಿ, ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಕಪಟ ನಾಟಕವನ್ನು ಬಯಲು ಮಾಡಲು ಜಿಲ್ಲಾ ಮಹಿಳಾ ಕಾಂಗ್ರೆಸ್‌ ನಿಂದ ಪ್ರತಿಭಟಿಸಲಾಯಿತು. ೨೦೨೩ರಿಂದಲೂ ಮಹಿಳಾ ಮೀಸಲಾತಿ ಜಾರಿ ಮಾಡದೇ ಬಿಜೆಪಿ ನಾಟಕ ಮಾಡುತ್ತಿದೆ. ಈ ನಡುವೆ ಕ್ಷೇತ್ರ ವಿಂಗಡಣೆಯ ನಾಟಕ ಆಗುತ್ತಿದೆ. ಹೀಗಾಗಿ ಕೇಂದ್ರ ಬಿಜೆಪಿ ಈ ಕೂಡಲೇ ಮಹಿಳಾ ಮೀಸಲು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪರ್ವೀನ್ ತಾಜ್ ರಾಜ್ಯ ಕಾರ್ಯದರ್ಶಿ ಮಹಿಳಾ ಕಾಂಗ್ರೆಸ್, ಸಹಕಾರ ಘಟಕದ ಮಹಿಳಾ ಅಧ್ಯಕ್ಷೆ ತಾರಾ, ಮೈಸೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶ್ರೀಲಕ್ಷ್ಮಿ, ಜಿಲ್ಲೆಯ ಎಲ್ಲಾ ಬ್ಲಾಕ್‌ ಹಾಗೂ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Call Now Button