Online News in ಕನ್ನಡ

ಇಬ್ಬರು ಪ್ರಭಾವಿಗಳು ಜೈಲು ಪಾಲಾಗಲು ಛಾಯಾಚಿತ್ರ, ವಿಡಿಯೋಗಳೇ ಕಾರಣ: ಡಿಸಿಪಿ

ಮೈಸೂರು: ಅಪರಾಧ ಪತ್ತೆಯಲ್ಲಿ ಛಾಯಾಚಿತ್ರ ಮತ್ತು ವಿಡಿಯೋಗಳು ಪ್ರಮುಖ ಪಾತ್ರ ನಿರ್ವಹಿಸಲಿದ್ದು ಸದ್ಯ ರಾಜ್ಯದ ಇಬ್ಬರು ಪ್ರಭಾವಿಗಳು ಜೈಲು ಪಾಲಾಗಲು ಛಾಯಾಚಿತ್ರ- ವಿಡಿಯೋಗಳೇ ಕಾರಣ ಎಂದು ಮೈಸೂರು ನಗರ ಪೊಲೀಸ್ ಇಲಾಖೆ ಸಂಚಾರಿ ಮತ್ತು ಅಪರಾಧ ವಿಭಾಗದ ಡಿಸಿಪಿ ಕೆ.ಎಸ್. ಸುಂದರರಾಜ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಇಂದು ವಿಶ್ವ ಛಾಯಾಗ್ರಾಹಣ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ವಿಜೇತ ಪತ್ರಿಕಾ ಛಾಯಾಗ್ರಾಹಕರಿಗೆ ಬಹುಮಾನ ವಿತರಿಸಿ ಮಾತನಾಡುತ್ತ ಅವರು ರಾಜ್ಯದ ಆ ಇಬ್ಬರು ಪ್ರಭಾವಿಗಳು ಯಾರು ಎಂದು ಹೇಳಲಿಲ್ಲ.
ಇತ್ತೀಚೆಗೆ ಮೈಸೂರು ನಗರ ಪೊಲೀಸರು ಭೇದಿಸಿದ ಕೆಲ ಪ್ರಕರಣಗಳಲ್ಲಿ ಕೆಲ ಫೋಟೋಗಳು ತನಿಖೆಗೆ ನೆರವಾಗಿವೆ. ಮೊನ್ನೆ ಮೊನ್ನೆ ಒಬ್ಬ ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಇದೇ ಛಾಯಾಗ್ರಾಹಣ ಕಾರಣ. ಅಲ್ಲದೆ, ಅಪರಾಧಿಗಳಿಗೆ ಶಿಕ್ಷೆ ನೀಡುವಾಗ ಛಾಯಾಚಿತ್ರ ಮತ್ತು ವಿಡಿಯೋಗಳು ಸಾಕ್ಷಿಗಳಾಗುತ್ತವೆ. ಹಾಗಾಗಿ ಛಾಯಾಚಿತ್ರ ಎನ್ನುವುದು ಪೊಲೀಸರ ಕರ್ತವ್ಯದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ನಗರಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ಅವರು, ಯಾವುದೇ ಘಟನೆಗಳು ನಡೆದಾಗ ಜಿಲ್ಲಾಡಳಿತಕ್ಕಿಂತ ಮೊದಲು ಸ್ಥಳಕ್ಕೆ ತಲುಪುವ ಸಾಹಸ ಮಾಡುವವರು ಇದೇ ಪತ್ರಿಕಾ ಛಾಯಾಗ್ರಾಹಕರು. ಬೇರೆಯವರನ್ನು ಸುಂದರವಾಗಿ ಸೆರೆ ಹಿಡಿಯುವ ಛಾಯಾಗ್ರಾಹಕರು ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಹಾಗೂ ಮೈಸೂರು ನಗರದ ಅಭಿವೃದ್ಧಿಗೆ ಮಾಧ್ಯಮ ಸಹಕಾರಿಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆಪಿಎನ್ ಸಂಸ್ಥೆಯ ಸಂಪಾದಕ ಸೆಗ್ಗೆರೆ ರಾಮಸ್ವಾಮಿ, ಎಂತವರನ್ನೂ ‘ ಸ್ಮೈಲ್ ಪ್ಲೀಸ್ ‘ ಎಂದು ಕರೆದು ನಗಿಸುವ ಶಕ್ತಿ ಇರುವ ಛಾಯಾಗ್ರಾಹಕರು ತೆಗೆಯುವ ಒಂದೊಂದು ಚಿತ್ರವೂ ಇತಿಹಾಸವನ್ನು ದಾಖಲಿಸುತ್ತದೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಛಾಯಾಗ್ರಾಹಣ ಮನುಷ್ಯನಲ್ಲಿ ಶಿಸ್ತು ಮತ್ತು ಸೌಂದರ್ಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಇಂತಹ ವೃತ್ತಿಯಲ್ಲಿ ತೊಡಗಿರುವ ಮೈಸೂರಿನ ಪತ್ರಿಕಾ ಛಾಯಾಗ್ರಾಹಕರು ಅತ್ಯಂತ ಪ್ರತಿಭಾನ್ವಿತ ಮತ್ತು ಕ್ರಿಯಾಶೀಲರು. ದೇಶದ ಯಾವುದೇ ಮೂಲೆಯಲ್ಲಿ ಛಾಯಾಚಿತ್ರ ಸ್ಪರ್ಧೆ ನಡೆದರೆ ಅದರಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿ ಮೈಸೂರಿನ ಪತ್ರಿಕೋದ್ಯಮಕ್ಕೆ ಮೆರಗು ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಹಿರಿಯ ಛಾಯಾಗ್ರಾಹಕ ಪ್ರಗತಿ ಗೋಪಾಲ ಕೃಷ್ಣ, ನರೆಡ್ಕೊ ಅಧ್ಯಕ್ಷ ರವಿಕುಮಾರ್, ಉದ್ಯಮಿ ಡಾ. ಕಾರ್ತಿಕ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಹಾಜರಿದ್ದರು.

ಉದಯ್ ಪ್ರಥಮ, ರವಿ ದ್ವಿತೀಯ, ಮಧು ತೃತೀಯ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಯ ಛಾಯಾಗ್ರಾಹಕ ಉದಯ್ ಶಂಕರ್ ಮೊದಲ ಬಹುಮಾನ, ಆಂದೋಲನ ಪತ್ರಿಕೆಯ ಛಾಯಾಗ್ರಾಹಕ ಗವಿಮಠ ರವಿ ದ್ವಿತೀಯ ಬಹುಮಾನ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಛಾಯಾಗ್ರಾಹಕ ಎಸ್.ಆರ್. ಮಧುಸೂದನ್ ತೃತೀಯ ಬಹುಮಾನ ಮತ್ತು ಸಮಾಧಾನಕರ ಬಹುಮಾನವನ್ನು ಪ್ರಜಾವಾಣಿ ಪತ್ರಿಕೆಯ ಅನುಪ್ ಕೆ. ಪಡೆದರು. ಇವರಿಗೆ ಕ್ರಮವಾಗಿ 10 ಸಾವಿರ ರೂ, 5 ಸಾವಿರ ರೂ, 3 ಸಾವಿರ ರೂ. ಮತ್ತು 2 ಸಾವಿರ ರೂ.ಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು. ತೀರ್ಪುಗಾರರಾಗಿ ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ, ಸೇನಾನಿ, ಹಿರಿಯ ಛಯಾಗ್ರಾಹಕ ಸೆಗ್ಗೆರೆ ರಾಮಸ್ವಾಮಿ, ಮೈವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಆಗಮಿಸಿದ್ದರು.

Call Now Button