ಮೈಸೂರು: ಬಿಜೆಪಿ ಮತ್ತು ಆರ್ಎಸ್ಎಸ್ ಒಳ ಮೀಸಲಾತಿಯ ಹೆಸರಿನಲ್ಲಿ ಪರಿಶಿಷ್ಟ ಜಾತಿಗಳ ನಡುವೆ ಒಡಕು ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ. ಮಹಾದೇವಪ್ಪ ಅವರು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಅಂಬೇಡ್ಕರ್ ತತ್ವದಲ್ಲಿ ಒಳಮೀಸಲಾತಿ ಜಾರಿ ಮಾಡಲು ಬದ್ಧರಾಗಿದ್ದಾರೆ ಎಂದು ಸಮರ್ಥಿಸಿಕೊಂಡರು.
ದೇಶದಲ್ಲಿ ಅತೀ ದೊಡ್ಡ ಜನಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿಯನ್ನು ಒಳ ಮೀಸಲಾತಿ ಹೆಸರಿನಲ್ಲಿ ಒಡೆಯಲು ಮುನ್ನುಡಿ ಬರೆದವರು ಅಂದು ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ.ದೇವೇಗೌಡ. ಅಂದಿನಿಂದ ಇಂದಿನವರೆಗೂ ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಒಟ್ಟಾಗಿಕೊಂಡೊಯ್ಯಲು ಯಾವ ರಾಜಕೀಯ ಪಕ್ಷಗಳೂ ಮತ್ತು ರಾಜಕೀಯ ನಾಯಕರು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಈನಡುವೆ, ಒಳ ಮೀಸಲಾತಿ ಹೆಸರಿನಲ್ಲಿ ನಮ್ಮನ್ನು ಒಡೆಯುವ ಸಂಚು ರೂಪಿಸಿದ್ದೇ ಆರ್.ಎಸ್. ಎಸ್ ಎಂದು ನುಡಿದರು.
ಬಿಜೆಪಿ ಮತ್ತು ಆರ್ಎಸ್ಎಸ್ನಲ್ಲಿ ಗುರುತಿಸಿಕೊಂಡಿರುವ ನಮ್ಮ ಸಮುದಾಯದ ಎನ್. ಮಹೇಶ್ ಮತ್ತು ನಾರಾಯಣಸ್ವಾಮಿ ಅವರು ಬಲಗೈ ಯುವಕರನ್ನು ಒಳಮೀಸಲಾತಿ ವಿಚಾರವಾಗಿ ಮುಂದಿಟ್ಟುಕೊಂಡು ಪರಿಶಿಷ್ಟ ಜಾತಿ ಸಮುದಾಯದಲ್ಲಿ ಒಡಕು ಉಂಟು ಮಾಡಿ ವಿಷಬೀಜ ಬಿತ್ತುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶತಶತಮಾನಗಳಿಂದಲೂ ಎಡಗೈ ಮತ್ತು ಬಲಗೈ ಒಂದೇ ತರನಾಡ ನೋವು, ಅವಕಾಶ ವಂಚನೆ, ಅಪಮಾನಗಳನ್ನು ಎದುರಿಸುತ್ತಾ ಬಂದಿದ್ದು ನಾವೆಲ್ಲ ಒಟ್ಟಾಗಿಯೇ ನಮ್ಮ ಸವಲತ್ತನ್ನು ಸಮಾನವಾಗಿ ಹಂಚಿಕೊಳ್ಳಬೇಕು ಮತ್ತು ರಾಜಕೀಯ ಪಕ್ಷಗಳ ಒಳ ಸಂಚುಗಳಿಗೆ ಬಲಿಯಾಗಬಾರದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪ್ರೊ. ಟಿ.ಎಂ.ಮಹೇಶ್, ಸುನಿಲ್ ನಾರಾಯಣ, ಮುರುಡಹಳ್ಳಿ ಮಂಜು, ಎಸ್.ರಾಜೇಶ್ ಮೊದಲಾದವರು ಹಾಜರಿದ್ದರು.

