Online News in ಕನ್ನಡ

ವಿಷ್ಣುವರ್ಧನ್‌ ಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ; ಸಿಎಂಗೆ ಮನವಿ

ಬೆಂಗಳೂರು: ಕನ್ನಡ ಚಿತ್ರರಂಗದ ಸಾಹಸ ಸಿಂಹ, ಯಜಮಾನ ಡಾ. ವಿಷ್ಣುವರ್ಧನ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಕೆಂಗೇರಿ ಬಳಿಯ ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣುವರ್ಧನ್‌ ಅಂತ್ಯಕ್ರಿಯೆ ನಡೆಸಿದ್ದ ಜಾಗ ವಿವಾದದ ಸ್ವರೂಪ ಪಡೆದುಕೊಂಡಿತ್ತು. ರಾಜ್ಯಾದ್ಯಂತ ವಿಷ್ಣು ಅಭಿಮಾನಿಗಳು ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ತದ ನಂತರ ಕಿಚ್ಚ ಸುದೀಪ್‌ ಅವರು ತಮ್ಮ ಸ್ವಂತ ಹಣದಲ್ಲಿ ಹತ್ತು ಗುಂಟೆ ಜಾಗವನ್ನು ಖರೀದಿ ಮಾಡಿ ಆ ಸ್ಥಳದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡುವುದಾಗಿ ತೀರ್ಮಾನಿಸಿದ್ದರು. ಇದಾದ ಬಳಿಕ ದಿವಂಗತ ನಟ ಬಾಲಕೃಷ್ಣ ಅವರಿಗೆ ಸರ್ಕಾರ ನೀಡಿದ್ದ ಹತ್ತು ಎಕರೆ ಜಾಗವನ್ನು ಅರಣ್ಯ ಇಲಾಖೆ ವಾಪಸ್‌ ಪಡೆದುಕೊಳ್ಳಲು ಆದೇಶ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳಿಂದ ದಿವಂಗತ ನಟ ವಿಷ್ಣುವರ್ಧನ್‌ ಅವರಿಗೆ ಬೆಂಗಳೂರಿನಲ್ಲಿ ಸೂಕ್ತ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರಕ್ಕೆ ಆಗಲಿಲ್ಲ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಜಯಮಾಲ, ಶ್ರುತಿ, ಮಾಳವಿಕ ಅವಿನಾಶ್‌ ಸಿಎಂ ಅವನ್ನು ಭೇಟಿ ಮಾಡಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿರುವುದು ವಿಶೇಷವಾಗಿದೆ. ಇದರ ಜೊತೆಗೆ ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರಂನ ರಸ್ತೆಗೆ ನಾಮಕರಣ ಮಾಡುವಂತೆಯೂ ಮನವಿ ಮಾಡಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

Call Now Button