Online News in ಕನ್ನಡ

ಮೌಡ್ಯ ಭಾರತದಲ್ಲಿ ವಿಜ್ಞಾನದ ಮೋಡಿ – ಶ್ರೀಮತಿ ವಿಭಾವಸು ಕೆ.ಆರ್. ಅವರ ಬರಹ

ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ಲೇಖಕಿ ಶ್ರೀಮತಿ ವಿಭಾವಸು ಕೆ.ಆರ್. ಅವರ ಬರಹ
ವಿಜ್ಞಾನವು ಮಾನವನ ಚಿಂತನೆ ಮತ್ತು ಬದುಕಿನ ಪ್ರಮುಖ ಅಂಶ, ಅದು ಮಾನವನ ವಿಕಾಸದ ದಾರಿದೀಪ. ಪ್ರಾಚೀನ ಯುಗದಿಂದ ಇಂದಿನ ಆಧುನಿಕ ಡಿಜಿಟಲ್ ತಂತ್ರಜ್ಞಾನದ ಕಾಲಮಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಆರ್ಥಿಕತೆ, ಆರೋಗ್ಯ, ಶಿಕ್ಷಣ, ಸಂವಹನ, ಮತ್ತು ಪರಿಸರದ ಸ್ಥಿರತೆಯನ್ನು ನಿರ್ಧರಿಸುವ ಪ್ರಮುಖ ಶಕ್ತಿಯಾಗಿದೆ. ಅಲ್ಲದೆ, ನಮ್ಮ ನಿತ್ಯಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ.
ನಾವು ನಿಷ್ಕ್ರಿಯರಾಗಿದ್ದಾಗಲೂ ವಿಜ್ಞಾನ ನಮ್ಮ ಸುತ್ತ ಕ್ರಿಯಾಶೀಲ ವಾಗಿರುತ್ತದೆ. ಅದು ಬೆಳಕಿನ ವೇಗದಿಂದ ಮಾಹಿತಿ ರವಾನಿಸುವ ಇಂಟರ್‌ನೆಟ್ ಆಗಿರಬಹುದು, ಆರೋಗ್ಯವನ್ನು ಸುಧಾರಿಸುವ ವೈದ್ಯಕೀಯ ತಂತ್ರಜ್ಞಾನವಾಗಿರಬಹುದು, ಅಥವಾ ಜಗತ್ತನ್ನು ತಿಳಿಯುವ ಬಾಹ್ಯಾಕಾಶ ಸಂಶೋಧನೆ ಆಗಿರಬಹುದು.
ಒಂದೆಡೆ ಭಾರತದ ಸಾಮಾಜಿಕ ವ್ಯವಸ್ಥೆಯು ಮಾನವನಲ್ಲಿ ಅಜ್ಞಾನ, ಮೌಢ್ಯ, ಕಂದಾಚಾರ ಬಿತ್ತಿದ್ದರೂ ಮತ್ತೊಂದೆಡೆ ಪ್ರಾಚೀನ ಕಾಲದಿಂದಲೂ ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ಮತ್ತು ಆಯುರ್ವೇದದಂತಹ ವಿಜ್ಞಾನ ಕ್ಷೇತ್ರಗಳಲ್ಲಿ ಅಪಾರ ಕೊಡುಗೆಗಳನ್ನು ನೀಡಿದೆ. ಇಂದು, ಬಾಹ್ಯಾಕಾಶ ಸಂಶೋಧನೆ, ಪರಮಾಣು ಶಕ್ತಿ, ಮಾಹಿತಿ ತಂತ್ರಜ್ಞಾನ, ಮತ್ತು ವೈದ್ಯಕೀಯ ವಿಜ್ಞಾನದಲ್ಲಿ ಭಾರತ ತನ್ನದೇ ಆದ ವಿಶಿಷ್ಟ ಹೆಜ್ಜೆಗುರುತು ಮೂಡಿಸಿ, ಪ್ರಗತಿ ಸಾಧಿಸಿ ಜಾಗತಿಕ ಗಮನ ಸೆಳೆಯುತ್ತಿದೆ.
ಭಾರತದಲ್ಲಿ ಪ್ರತಿವರ್ಷ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಭಾರತದ ಖ್ಯಾತ ಭೌತಶಾಸ್ತ್ರಜ್ಞ ಡಾ. ಸಿ.ವಿ. ರಾಮನ್ ಅವರು 1928ರಲ್ಲಿ ಕಂಡುಹಿಡಿದ “ರಾಮನ್ ಪರಿಣಾಮ”ವನ್ನು ಸ್ಮರಿಸುವ ಉದ್ದೇಶ ಇದಾಗಿದೆ. ಈ ಮಹತ್ವದ ಸಂಶೋಧನೆಗಾಗಿ, 1930ರಲ್ಲಿ ಅವರಿಗೆ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ಲಭಿಸಿತು. 1986ರಲ್ಲಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (NCSTC) ಭಾರತ ಸರ್ಕಾರವನ್ನು ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸಲು ವಿನಂತಿಸಿತು. ಅದರಂತೆಯೇ, 1987ರಿಂದ ಈ ದಿನವನ್ನು ದೇಶಾದ್ಯಾಂತ ವಿಜ್ಞಾನೋತ್ಸವವಾಗಿ ಆಚರಿಸಲಾಗುತ್ತಿದೆ. 2025ರ ವಿಜ್ಞಾನ ದಿನದ ಧ್ಯೇಯ ವಾಕ್ಯ “ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನದ ಬಳಕೆ : ಹಸಿರು ತಂತ್ರಜ್ಞಾನಗಳನ್ನು ಉತ್ತೇಜಿಸುವುದು” (Science for Sustainable Development: Promoting Green Technologies), ಇದು ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಜಾಗತಿಕ ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನದ ಪಾತ್ರವನ್ನು ಪ್ರತಿಬಿಂಬಿಸುತ್ತದೆ.
ಪ್ರಾಚೀನ ಭಾರತದಲ್ಲಿ ನಾವು ಕಂಡುಕೊಂಡ ಶೂನ್ಯ ಸಂಕಲ್ಪನೆ, ಆರ್ಯಭಟ್ಟನ ಗಣಿತ ಶಾಸ್ತ್ರ, ಚರಕ ಮತ್ತು ಸುಶ್ರುತರ ಆಯುರ್ವೇದ ಸಂಶೋಧನೆಗಳು ಭಾರತದ ವೈಜ್ಞಾನಿಕ ಪರಂಪರೆಯ ಭುನಾದಿ ಸೂಚಿಸುತ್ತದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು, 20ನೇ ಶತಮಾನದಲ್ಲಿ ವಿಜ್ಞಾನದಲ್ಲಿ ಮಹತ್ವದ ಸಾಧನೆಗಳ ಮೂಲಕ ಭಾರತವು ಹೊಸ ತಿರುವು ಪಡೆದಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಗತ್ತಿನ ಅತ್ಯಂತ ಯಶಸ್ವೀ ಬಾಹ್ಯಾಕಾಶ ಸಂಸ್ಥೆಗಳ ಪೈಕಿ ಒಂದಾಗಿದೆ. 2014ರಲ್ಲಿ ‘ಮಂಗಳಯಾನ’ವನ್ನು ಅತಿ ಕಡಿಮೆ ವೆಚ್ಚದಲ್ಲಿ ಯಶಸ್ವಿಯಾಗಿ ಉಡಾಯಿಸಿ, ಮಂಗಳ ಗ್ರಹವನ್ನು ತಲುಪಿ, ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಪ್ರದರ್ಶಿಸಿದ್ದಲ್ಲದೆ, ಅಂತರಗ್ರಹ ಪ್ರಯಾಣ, ಆಳವಾದ ಬಾಹ್ಯಾಕಾಶ ಸಂವಹನ ಮತ್ತು ಸಂಚರಣೆಯ ಪ್ರಮುಖ ತಂತ್ರಜ್ಞಾನಗಳನ್ನು ಇದು ಪರೀಕ್ಷಿಸಿತು. ಈ ಹಾದಿಯನ್ನು ಮುಂದುವರಿಸಿ, 2023ರಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವೆಂಬ ಗೌರವವನ್ನು ಭಾರತ ಸಂಪಾದಿಸಿತು. ಇತ್ತೀಚೆಗೆ, 2024ರಲ್ಲಿ ಇಸ್ರೋ ಎರಡು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಡಾಕ್ ಮಾಡುವ ಮೂಲಕ, ಭಾರತವು ಅಮೆರಿಕಾ, ರಷ್ಯಾ, ಮತ್ತು ಚೀನಾದ ನಂತರ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಯಿತು. ಈ ಎಲ್ಲ ಸಾಧನೆಗಳು ವಿಶ್ವದ ಗಮನವನ್ನು ಭಾರತದ ಅಂತರಿಕ್ಷ ವಿಜ್ಞಾನದ ಶಕ್ತಿಯತ್ತ ಸೆಳೆಯುತ್ತಿದೆ.
ಭಾರತವು ಪರಮಾಣು ಶಕ್ತಿಯಲ್ಲೂ ಸ್ವಾವಲಂಬನೆ ಹೊಂದಿರುವ ದೇಶವಾಗಿದೆ. 1974ರಲ್ಲಿ ಮೊದಲ ಪರಮಾಣು ಪರೀಕ್ಷೆಯಾದ “ಸ್ಮೈಲಿಂಗ್ ಬುದ್ಧ” ದಿಂದ ಹಿಡಿದು, 1998ರಲ್ಲಿ ನಡೆದ ಪೋಖ್ರಾನ್-II ಪರೀಕ್ಷೆಯವರೆಗೆ, ಭಾರತವು ತನ್ನ ಪರಮಾಣು ವೈಜ್ಞಾನಿಕ ಸಾಮರ್ಥ್ಯವನ್ನು ಬಲಪಡಿಸಿಕೊಂಡಿದೆ . ಈ ತಂತ್ರಜ್ಞಾನ ಇಂದು ಶಾಂತಿಯುತ ಉದ್ದೇಶಗಳಿಗಾಗಿ ಪ್ರಪಂಚದ ಬಲಿಷ್ಠ ಆಣ್ವಿಕ ಶಕ್ತಿಯಾಗಲು ಭಾರತವನ್ನು ಸಜ್ಜುಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ನವೀನ ಪರಮಾಣು ಶಕ್ತಿನಿಲಯಗಳು, ಉರಿಮಟ್ಟ ಕಡಿಮೆ ಇರುವ ತಂತ್ರಜ್ಞಾನಗಳ ಮೂಲಕ ಪರಿಸರ ಸ್ನೇಹಿ ಶಕ್ತಿಯ ಬೆಳವಣಿಗೆಯಲ್ಲಿ ಭಾರತಕ್ಕೆ ಹೊಸ ದಾರಿಗಳನ್ನು ತೆರೆದಿದೆ.
ಹಾಗೆಯೇ, ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಭಾರತ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. 2020-21ರ ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತ ತನ್ನ ವೈಜ್ಞಾನಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸಿತು. ಸ್ವದೇಶಿ ಲಸಿಕೆಗಳು, ತ್ವರಿತ ಕೋವಿಡ್ ಪರೀಕ್ಷಾ ಕಿಟ್‌ಗಳು, ಮತ್ತು ಪ್ಲಾಸ್ಮಾ ಥೆರಪಿ ಮುಂತಾದ ಸಂಶೋಧನೆಗಳು ಭಾರತದ ವೈದ್ಯಕೀಯ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟವು. ಇತ್ತೀಚಿನ ದಿನಗಳಲ್ಲಿ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಜೀನೋಮ್ ಎಡಿಟಿಂಗ್, ಕೃತಕ ಹೃದಯ ತಂತ್ರಜ್ಞಾನ, ಮತ್ತು ರೋಬೊಟಿಕ್ ಶಸ್ತ್ರಚಿಕಿತ್ಸೆಗಳಂತಹ ಅಭಿವೃದ್ಧಿಗಳು ಆರೋಗ್ಯ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳಾಗಿವೆ.
ಭಾರತದ ಐಟಿ ಉದ್ಯಮವು ಪ್ರಪಂಚದ ತಂತ್ರಜ್ಞಾನ ಪಥದ ಮಾರ್ಗಸೂಚಿಯಾಗಿದೆ. ಸಾಫ್ಟ್‌ವೇರ್ ಅಭಿವೃದ್ದಿಯಲ್ಲಿ ಭಾರತ ಜಾಗತಿಕ ನಾಯಕತ್ವವನ್ನು ಕಾಯ್ದುಕೊಂಡಿದೆ ಮತ್ತು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರತದ ಪಾಲ್ಗೊಳ್ಳುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಾಟ್‌ಜಿಪಿಟಿ, ಡೇಟಾ ಅನಾಲಿಟಿಕ್ಸ್,ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ ಮುಂತಾದ ತಂತ್ರಜ್ಞಾನಗಳಲ್ಲಿ ಭಾರತವು ತನ್ನದೇ ಆದ ಛಾಪು ಮೂಡಿಸುತ್ತಿದೆ. 2023ರಲ್ಲಿ ಭಾರತವು AI ಆಧಾರಿತ ಭಾಷಾಂತರ ಸಾಧನ “ಭಾಷಿಣಿ ” ಅನ್ನು ಅಭಿವೃದ್ಧಿಪಡಿಸಿದೆ. TCS, Infosys, Wipro ಮುಂತಾದ ಕಂಪನಿಗಳು ಜಾಗತಿಕ AI ಸಂಶೋಧನೆಯಲ್ಲಿ ಮುಂಚೂಣಿಯಲ್ಲಿವೆ.
ಆಧುನಿಕ ವಿಜ್ಞಾನವು ಕೇವಲ ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸೀಮಿತವಲ್ಲ, ಅದು ಪರಿಸರ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಜಾಗತಿಕ ತಾಪಮಾನ ವೃದ್ಧಿ, ಹವಾಮಾನ ಬದಲಾವಣೆ, ಮತ್ತು ಜೀವವೈವಿಧ್ಯದ ನಾಶವನ್ನು ತಡೆಹಿಡಿಯುವಲ್ಲಿ ಆಧುನಿಕ ವಿಜ್ಞಾನ ಪಾತ್ರ ಮಹತ್ವದ್ದಾಗಿದೆ . ಭಾರತವು ಈ ಕ್ಷೇತ್ರದಲ್ಲೂ ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ.
2015ರಲ್ಲಿ ಭಾರತವು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಿ, ಹಸಿರು ಮನೆ ಅನಿಲ ಉತ್ಸರ್ಗವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಸೌರ ಮಿಷನ್ (National Solar Mission) ಕಾರ್ಯಕ್ರಮದಡಿಯಲ್ಲಿ, 2030ರ ಒಳಗೆ 500 ಗಿಗಾವಾಟ್‌ಗಳ ಪುನರ್ವಿನ್ಯಾಸ ಶಕ್ತಿ ಉತ್ಪಾದನೆ ಗುರಿಯನ್ನು ಭಾರತ ಹೊಂದಿದೆ. ಇದರಿಂದ ಭಾರತವು ವಿಶ್ವದ ಅಗ್ರಗಣ್ಯ ನವೀಕರಿಸಬಹುದಾದ ಶಕ್ತಿ ಉತ್ಪಾದನೆ ಕೇಂದ್ರಗಳ ಸಾಲಿನಲ್ಲಿ ಸೇರಲಿದೆ.ಇತರ ಪ್ರಮುಖ ಯೋಜನೆಗಳಲ್ಲಿ, ಹೈಡ್ರೋಜನ್ ಎನರ್ಜಿ ಮಿಷನ್ (Green Hydrogen Mission), ಪ್ಲಾಸ್ಟಿಕ್ ಮರುಬಳಕೆ ತಂತ್ರಜ್ಞಾನ, ಮತ್ತು ನವೀನ ಕಾರ್ಬನ್ ಸೆಕ್ವೆಸ್ಟ್ರೇಷನ್ ತಂತ್ರಜ್ಞಾನಗಳ ಸಂಶೋಧನೆಗಳಿವೆ. ಇದಲ್ಲದೆ, ಇತ್ತೀಚೆಗೆ ಆರಂಭವಾದ “ಮಿಷನ್ ಲಿಥಿಯಂ” ಭಾರತದಲ್ಲಿ ಲಿಥಿಯಂ-ion ಬ್ಯಾಟರಿ ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತಿದೆ, ಇದು ವಿದ್ಯುತ್ ವಾಹನ (EV) ಕ್ರಾಂತಿಗೆ ಪ್ರೇರಣೆಯಾಗಿದೆ.

ಇಷ್ಟೆಲ್ಲ ಸಾಧನೆಗಳಿಂದ ಭಾರತವು ವೈಜ್ಞಾನಿಕ ಪ್ರಗತಿಯ ಪಥದಲ್ಲಿ ಅಗ್ರಗಣ್ಯ ರಾಷ್ಟ್ರವಾಗಲು ಹೆಜ್ಜೆ ಹಾಕುತ್ತಿದೆಯಾದರೂ, ಕೆಲವು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ.
1. ಸಂಶೋಧನೆ ಮತ್ತು ಅಭಿವೃದ್ಧಿಗೆ ಕಡಿಮೆ ಹೂಡಿಕೆ – ಭಾರತದ ಜಿಡಿಪಿಯ ಕೇವಲ 0.65% ಸಂಶೋಧನೆ ಮತ್ತು ಅಭಿವೃದ್ಧಿಗೆ (Research & Development) ಮೀಸಲಿರಿಸಲಾಗಿದೆ, ಇದು ಅಮೇರಿಕಾ (2.8%), ಚೀನಾ (2.4%), ಮತ್ತು ಜಪಾನ್ (3.2%) ನೊಡನೆ ಹೋಲಿಸಿದರೆ ಕಡಿಮೆಯಾಗಿದೆ. ತಂತ್ರಜ್ಞಾನ ಅಭಿವೃದ್ಧಿಗೆ ಈ ಹೂಡಿಕೆಯನ್ನು ಹೆಚ್ಚಿಸುವ ಅಗತ್ಯವಿದೆ
2. ಪ್ರತಿಭೆಯ ಸೋರಿಕೆ (Brain Drain) – ಭಾರತೀಯ ವಿಜ್ಞಾನಿಗಳು ಮತ್ತು ತಂತ್ರಜ್ಞಾನ ತಜ್ಞರು ಹೆಚ್ಚು ವೇತನ ಮತ್ತು ಉತ್ತಮ ಸಂಶೋಧನಾ ಸೌಲಭ್ಯಗಳಿಗಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ. ಇದನ್ನು ತಡೆಯಲು, ಸಂಶೋಧನೆಗೆ ಸೂಕ್ತ ಮೂಲಸೌಕರ್ಯ ಮತ್ತು ಆರ್ಥಿಕ ಬೆಂಬಲದ ಅವಶ್ಯಕತೆ ಇದೆ.
3. ತಂತ್ರಜ್ಞಾನ-ಆಧಾರಿತ ಉದ್ಯಮಕ್ಕೆ ಬೆಂಬಲದ ಕೊರತೆ – ಸ್ಟಾರ್ಟಪ್ ಗಳಿಗೆ ಅಗತ್ಯವಿರುವ ಸಬ್ಸಿಡಿಗಳು ಮತ್ತು ತಂತ್ರಜ್ಞಾನ ಮಾರ್ಗದರ್ಶನವು ಇನ್ನೂ ತಕ್ಕಮಟ್ಟಿಗೆ ಸರಿಯಾದ ಮಾರ್ಗದಲ್ಲಿ ಹೋಗುತ್ತಿಲ್ಲ. ಇದು ಭಾರತದಲ್ಲಿ ಹೊಸ ತಂತ್ರಜ್ಞಾನ ಆವಿಷ್ಕಾರಗಳನ್ನು ಮಿತಿಗೊಳಿಸಿವೆ.
4. ಗ್ರಾಮೀಣ ಪ್ರದೇಶದಲ್ಲಿ ವಿಜ್ಞಾನ ಶಿಕ್ಷಣದ ಕೊರತೆ – ಭಾರತದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಉತ್ತಮ ವಿಜ್ಞಾನ ಶಿಕ್ಷಣದ ಕೊರತೆಯಿದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಎಲ್ಲಾ ವಲಯಗಳಲ್ಲಿ ಹಬ್ಬಿಸಲು ಶಿಕ್ಷಣದ ಮಟ್ಟವನ್ನು ಹೆಚ್ಚಿಸುವ ಅಗತ್ಯವಿದೆ.

ಮುಂದಿನ ದಾರಿ: ವಿಜ್ಞಾನಭದ್ರ ಭಾರತ
ಭಾರತವು ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಲು, ಹಲವು ಪ್ರಮುಖ ದಿಕ್ಕುಗಳಲ್ಲಿ ಮುನ್ನಡೆಯುವ ಅಗತ್ಯವಿದೆ.
R&D ಬಜೆಟ್ ಹೆಚ್ಚಿಸುವುದು – ವಿಜ್ಞಾನಕ್ಕೆ ಮೀಸಲಾಗಿರುವ GDP ಶೇ.1.5% ಕ್ಕಿಂತ ಹೆಚ್ಚು ಕಾಯ್ದಿರಿಸಿ, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಆಧುನಿಕ ಶಿಕ್ಷಣ ವ್ಯವಸ್ಥೆ – ಹೊಸ ಶಿಕ್ಷಣ ನೀತಿಯ (NEP 2020) ಅಡಿ STEM (Science, Technology, Engineering, Mathematics) ಶಿಕ್ಷಣವನ್ನು ಇನ್ನಷ್ಟು ಬಲಪಡಿಸುವುದು. ವೈಜ್ಞಾನಿಕ ಪ್ರವಾಸೋದ್ಯಮ (Scientific Tourism) – ಯುವಕರಿಗೆ ವಿಜ್ಞಾನಕ್ಕೆ ಹೆಚ್ಚಿನ ಒಲವು ಮೂಡಿಸಲು ISRO, DRDO, IISc, IIT ಮುಂತಾದ ಸಂಸ್ಥೆಗಳಿಗೆ ಪ್ರವಾಸದ ಅವಕಾಶ ಕಲ್ಪಿಸುವುದು.ಪ್ರಯೋಗಶೀಲ ಇನೋವೇಶನ್ (Applied Innovation) – ಸಂಶೋಧನೆಗೊಂದು ಉದ್ಯಮ ರೂಪ ನೀಡಲು ಉತ್ತೇಜಿಸುವುದು, ಜಾಗತಿಕ ಮಟ್ಟದ ಪೇಟೆಂಟ್‌ಗಳ ಸಂಖ್ಯೆ ಹೆಚ್ಚಿಸುವುದು. ಕೇಂದ್ರ-ರಾಜ್ಯ ಸಮನ್ವಯತೆ: ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳು ಕೇವಲ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲ, ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲೂ ನಡೆಯಬೇಕು.

ವಿಜ್ಞಾನವು ಒಂದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. ಭಾರತವನ್ನು 2047ರ ಹೊತ್ತಿಗೆ “ವಿಕಸಿತ ಭಾರತ” (Developed India) ಗುರಿಯತ್ತ ಒಯ್ಯಲು, ನಮ್ಮ ಮುಂದಿನ ಪೀಳಿಗೆಗೆ ವಿಜ್ಞಾನ ಪ್ರಜ್ಞೆ ಮೂಡಿಸುವುದು ಅಗತ್ಯ. ಭಾರತವು ತನ್ನ ವಿಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯವನ್ನು ಪೂರ್ತಿಯಾಗಿ ಬಳಸಿಕೊಂಡರೆ, ಮುಂದಿನ ದಶಕಗಳಲ್ಲಿ ವಿಶ್ವದ ವಿಜ್ಞಾನ ಪರಿಕಲ್ಪನೆಯನ್ನು ರೂಪಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಸಮಗ್ರ ಶ್ರದ್ಧೆ, ನಾವೀನ್ಯತೆ, ಮತ್ತು ಪ್ರಯೋಗಾತ್ಮಕತೆಯನ್ನು ಒಗ್ಗೂಡಿಸಿಕೊಂಡಾಗ
ಮಾತ್ರ ಭಾರತವು 21ನೇ ಶತಮಾನದ ವೈಜ್ಞಾನಿಕ ನಾಯಕತ್ವವನ್ನು ವಹಿಸುವ ಸಾಮರ್ಥ್ಯ ಹೊಂದುತ್ತದೆ. ಇದು ಕೇವಲ ಸರ್ಕಾರದ ಹೊಣೆಗಿಲ್ಲ, ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ, ವಿಜ್ಞಾನಿ, ಮತ್ತು ಭಾರತೀಯನ ಜವಾಬ್ದಾರಿಯಾಗಿದೆ.

 

Call Now Button