Online News in ಕನ್ನಡ

ಮಾಜಿ ಸಂಸದ ಪ್ರಜ್ವಲ್ ರೇಪಣ್ಣನಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ಕೋರ್ಟ್ !

ಬೆಂಗಳೂರು: ಆಗಸ್ಟ್ 2 , 2025 (vijayakaala.com)  ಕರ್ನಾಟಕವನ್ನು ಬೆಚ್ಚಿ ಬೀಳಿಸಿ, ದೇಶದ ಗಮನ ಸೆಳೆದಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಿಕ್ಷೆಯನ್ನು ಪ್ರಕಟಿಸಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿ, ಮೊಬೈಲ್‍ನಲ್ಲಿ ಚಿತ್ರೀಕರಣ ಮಾಡಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಈ ಆದೇಶ ದೇಶದಲ್ಲಿಯೇ ಬಹುದೊಡ್ಡ ಐತಿಹಾಸಿಕ ತೀರ್ಪು ಎಂದು ಪರಿಗಣಿಸಲಾಗಿದೆ.

ಪ್ರಕರಣ ದಾಖಲಾಗಿ  14 ತಿಂಗಳುಗಳ  ನಂತರ ತೀರ್ಪು ಪ್ರಕಟವಾಗಿದ್ದು, ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ತನಿಖೆ ಮತ್ತು ವಿಚಾರಣೆಯ ಸಮಯದಲ್ಲಿ, ಸಂತ್ರಸ್ತೆ ತಾನು ಸಂರಕ್ಷಿಸಿಟ್ಟಿದ್ದ ಸೀರೆಯನ್ನು ಸಾಕ್ಷಿಯಾಗಿ ಹಾಜರುಪಡಿಸಿದರು. ವಿಧಿವಿಜ್ಞಾನ ಪರೀಕ್ಷೆಯಲ್ಲಿ ಸೀರೆ ಮೇಲೆ ವೀರ್ಯದ ಕುರುಹುಗಳು ಕಂಡುಬಂದವು, ಇದನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಇದು ಅತ್ಯಾಚಾರವನ್ನು ಸಾಬೀತುಪಡಿಸಲು ನಿರ್ಣಾಯಕ ಸಾಕ್ಷಿಯಾಗಿದೆ ಎಂದು ಸಾಬೀತಾಯಿತು. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ, 2008 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಐಡಿ ವಿಶೇಷ ತನಿಖೆಯಲ್ಲಿ ಏನು ಕಂಡುಬಂದಿದೆ?

ಇನ್ಸ್‌ಪೆಕ್ಟರ್ ಶೋಭಾ ನೇತೃತ್ವದ ತಂಡ (ಎಸ್‌ಐಟಿ) ತನಿಖೆಯ ಸಮಯದಲ್ಲಿ 123 ಪುರಾವೆಗಳನ್ನು ಸಂಗ್ರಹಿಸಿ ಸುಮಾರು 2,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತು. ವಿಚಾರಣೆ ಡಿಸೆಂಬರ್ 31, 2024 ರಂದು ಪ್ರಾರಂಭವಾಯಿತು. ನಂತರ ಮುಂದಿನ ಏಳು ತಿಂಗಳುಗಳಲ್ಲಿ, ನ್ಯಾಯಾಲಯವು 23 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿತು ಮತ್ತು ವೀಡಿಯೊ ಕ್ಲಿಪ್‌ಗಳ ವಿಧಿವಿಜ್ಞಾನ ವರದಿಗಳನ್ನು ಸೇರಿಸಿತು.

ಪ್ರಕರಣವೇನು?

ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿರುವ ಕುಟುಂಬದ ಗನ್ನಿಕಾಡ ತೋಟದ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು 2021 ರಲ್ಲಿ ಎರಡು ಬಾರಿ ಅತ್ಯಾಚಾರ ಎಸಗಿದ್ದಾರೆ ಮತ್ತು ಆರೋಪಿಯು ತನ್ನ ಮೊಬೈಲ್ ಫೋನ್‌ನಲ್ಲಿ ಕೃತ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಜತೆಗೆ ಇದಾದ ಬಳಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಯಿತು.

ಪ್ರಜ್ವಲ್ ರೇವಣ್ಣ ಯಾರು?

ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಮೊಮ್ಮಗ ಹಾಗೂ ಶಾಸಕ, ಜೆಡಿಎಸ್‌ ಮುಖಂಡ ಎಚ್.ಡಿ.ರೇವಣ್ಣ ಅವರ ಮಗ. ಏಪ್ರಿಲ್ 26, 2024 ರಂದು ಲೋಕಸಭಾ ಚುನಾವಣೆಗೆ ಮುನ್ನ ಪ್ರಜ್ವಲ್ ರೇವಣ್ಣ ಅವರನ್ನು ಒಳಗೊಂಡ ಅಶ್ಲೀಲ ವೀಡಿಯೊಗಳು ಹಾಸನದಲ್ಲಿ ಹರಿದಾಡಿದವು. ಆಗ ಈ ಎಲ್ಲಾ  ಪ್ರಕರಣಗಳು ಬೆಳಕಿಗೆ ಬಂದವು.

ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇ 31 ರಂದು ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಎಸ್‌ಐಟಿ ಪ್ರಜ್ವಲ್‌ ರನ್ನು ಬಂಧಿಸಿತು.

2024 ರ ಲೋಕಸಭಾ ಚುನಾವಣೆಯಲ್ಲಿ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದರು. ನಂತರ ಜೆಡಿಎಸ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತು.

Call Now Button