Online News in ಕನ್ನಡ

ಟಿಪ್ಪು ಕನಸು ಕಂಡ್ರು, ನಾಲ್ವಡಿ ನನಸು ಮಾಡಿದ್ರು !

ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣ ಚರ್ಚೆಗೆ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿಕೆ
ಮೈಸೂರು, ಆಗಸ್ಟ್ 5 – ಹಳೇ ಮೈಸೂರು ಭಾಗದ ಜನರ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣಕ್ಕೆ ಟಿಪ್ಪು ಮೊದಲು ಅಡಿಗಲ್ಲು ಹಾಕಿದ್ದರು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ವಾಸ್ತವ ಸತ್ಯವನ್ನು ಬಿಚ್ಚಿಟ್ಟಿರುವ ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್, ಟಿಪ್ಪು ಸುಲ್ತಾನ್ ಅವರು ಅಣೆಕಟ್ಟೆ ಕಟ್ಟಬೇಕೆಂದು ಕನಸ್ಸು ಕಂಡು ಅಡಿಗಲ್ಲು ಹಾಕಿದ್ದು ನಿಜ, ತದ ನಂತರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸಾಕಾರಗೊಳಿಸಿದರು. ಕೆ.ಆರ್.ಎಸ್ ಅಣೆಕಟ್ಟೆಯ ಮೊದಲ ಹಂತದ ಯೋಜನೆಯ ನಕ್ಷೆಯನ್ನು ರೂಪಿಸಿದ್ದು ಮತ್ತು ಮೇಲುಸ್ತುವಾರಿ ಮಾಡಿದ್ದ ಅಂದಿನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಪ್ಪು ಸುಲ್ತಾನ್ 4ನೇ ಮೈಸೂರು ಯುದ್ಧದಲ್ಲಿ ಸಾಯುವ ನಾಲ್ಕು ವರ್ಷಗಳ ಹಿಂದೆ ಹರಿಯುತ್ತಿರುವ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿ ಈ ನೀರನ್ನು ಕೃಷಿಗೆ ಬಳಸಿಕೊಳ್ಳಬೇಕೆಂದು ಕನಸ್ಸು ಕಂಡು ಅಡಿಗಲ್ಲು ಹಾಕಿದ್ದರು. ತದ ನಂತರದ ಯುದ್ಧದಲ್ಲಿ ಅವರನ್ನು ಮೋಸದಿಂದ ಕೊಲ್ಲಲಾಯಿತು. ಇದಕ್ಕು ಮೊದಲು ಟಿಪ್ಪು ತಮ್ಮ ಆಳ್ವಿಕೆಯಲ್ಲಿ ಅನೇಕ ಕೆರೆಗಳನ್ನು ಕಟ್ಟಿಸಿದ್ದಾರೆ. ಉಳುವವರಿಗೆ ಭೂಮಿಯನ್ನು ಕೊಟ್ಟು ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಿದ್ದಾರೆ. ಇದಕ್ಕೆ ಅನೇಕ ಪುರಾವೆ, ಸಾಕ್ಷಿಗಳಿವೆ. ಇದರರ್ಥ ಟಿಪ್ಪುವಿಗೆ ಅಣೆಕಟ್ಟೆ ಕಟ್ಟುವ ಆಸೆ ಇತ್ತು. ಒಂದು ವೇಳೆ ಟಿಪ್ಪು ಮುಸ್ಲಿಂ ಧರ್ಮಕ್ಕೆ ಸೇರದೆ ಇದಿದ್ದರೆ ಅವರನ್ನು ಈ ಜನ ಹೆಗಲ ಮೇಲೆ ಕೂರಿಸಿಕೊಂಡು ಮೆರೆಯುತ್ತಿದ್ದರು ಎಂದರು.

Call Now Button