Online News in ಕನ್ನಡ

ಅರಸು ಕೊಟ್ಟ ಕೊಡುಗೆಗಳು ಇನ್ನೂ ಹಸಿರಾಗಿವೆ; ಎಂ.ಚಂದ್ರಶೇಖರ್‌ ಅಭಿಮತ

ಮೈಸೂರು: ಕರ್ನಾಟಕ ಕಂಡ ಒಬ್ಬ ಮಹಾನ್ ವ್ಯಕ್ತಿ ಹಾಗೂ ಉತ್ತಮ ಆಡಳಿತಗಾರರು ಡಿ.ದೇವರಾಜ ಅರಸು ಅವರು. ಅವರ ವ್ಯಕ್ತಿತ್ವ, ಕೊಡುಗೆ, ಅವರು ಮಾಡಿರುವಂತಹ ಕಾರ್ಯಕ್ರಮಗಳು ನಿತ್ಯ ಹಸಿರಾದಂತಹವು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಹಾಗೂ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ಗೌರವ ಅಧ್ಯಕ್ಷರಾದ ಎಂ.ಚoದ್ರಶೇಖರ್ ಅವರು ಹೇಳಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರ 110 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ತಮ್ಮ ಅಧಿಕಾರವನ್ನು ಚಲಾಯಿಸಿದರು. ಎಲ್ಲರೂ ಸಹ ಸ್ಮರಿಸಬಹುದಾದ ಸ್ಮರಣೀಯವಾದ ಎಲ್ಲಾ ಕಾಲಕ್ಕೂ ಶಾಶ್ವತವಾಗಿ ನಿಲ್ಲಬಹುದಾದಂತಹ ಅಧಿಕಾರವನ್ನು ಕೊಟ್ಟಂತಹವರು ಡಿ.ದೇವರಾಜ ಅರಸು ಅವರು. ಇವರು ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಿದಂತಹ ಅನೇಕ ಯೋಜನೆಗಳು ಮತ್ತು ಕಾನೂನುಗಳು ಇಂದಿಗೂ ಸಹ ಪ್ರಸ್ತುತವಾಗಿದೆ ಎಂದರು.

ಇವರು ಕೃಷಿ ಇಲಾಖೆಗೆ, ಹೈನುಗಾರಿಕೆಗೆ, ಶಿಕ್ಷಣ ಕ್ಷೇತ್ರಕ್ಕೆ ರಾಜಕೀಯ ಕ್ಷೇತ್ರಕ್ಕೆ ಹಾಗೂ ಸಾಮಾಜಿಕ ನ್ಯಾಯಲಯದ ಕ್ಷೇತ್ರಗಳಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ. ಇವರು ರಾಜ್ಯದ ಅಭಿವೃದ್ಧಿಗಾಗಿ ನೀಡಿರುವಂತಹ ಕೊಡುಗೆ ಅಪಾರವಾದದ್ದು. ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಹೆಚ್ಚು ಶ್ರಮಿಸಿದರು, ಅನೇಕ ಭೂ ಸುಧಾರಣೆಗಳನ್ನು ಜಾರಿಗೆ ತಂದರು. ಜೀತ ಪದ್ದತಿ ನಿಷೇಧ ಜಾರಿ ಮಾಡಿದರು. ಋಣಭಾರ ಪರಿಹಾರ ಕಾಯಿದೆಯನ್ನು ಜಾರಿಗೆ ತಂದರು. ಸಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳನ್ನು ಜಾರಿ ಮಾಡಿದರು. ರಾಜಕೀಯ ಸಮಾನತೆಯನ್ನು ತಂದರು. ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿ ಅವರನ್ನು ಮಲ ಹೊರುವುದರಿಂದ ವಿಮೋಚನೆಗೋಳಿಸಿದರು ಎಂದು ತಿಳಿಸಿದರು.

ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿದ ವ್ಯಕ್ತಿ ಡಿ.ದೇವರಾಜ ಅರಸು ಅವರು. ಮುಳ್ಳಿನ ಹಾದಿಯಲ್ಲಿ ಹೂವನ್ನು ಬಿತ್ತುವಂತಹ ಕೆಲಸಮಾಡಿದವರು. ಕನ್ನಡ ಭಾಷೆಯ ಮೇಲೆ ಅವರಿಗಿದ್ದ ಪ್ರೀತಿ ಅಪಾರವಾದದ್ದು, ಭಾಷೆಯ ಬೆಳವಣಿಗೆಗಾಗಿ ಹೆಚ್ಚು ಕನಸನ್ನು ಕಂಡಿದ್ದರು. ಎಲ್ಲವೂ ಸಹ ಕನ್ನಡದಲ್ಲಿಯೇ ಆಗಬೇಕು ಎಂಬ ಆಕಾಂಕ್ಷೆಯನ್ನು ಹೊಂದಿದ್ದರು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಜಿ .ಲಕ್ಷ್ಮಿಕಾಂತ ರೆಡ್ಡಿ ಅವರು ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರ 110 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಈ ಸಂಧರ್ಭದಲ್ಲಿ ಎಸ್.ಎಸ್. ಎಲ್.ಸಿಯಲ್ಲಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್.ಯುಕೇಶ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ರಾಘವೇಂದ್ರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶಿವಕುಮಾರ್, ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸೋಮಶೇಖರ್, ಹಾಗೂ ಜಿಲ್ಲಾ ಮಟ್ಟದ ಕಲ್ಯಾಣಾಧಿಕಾರಿಗಳು, ತಾಲ್ಲೂಕು ಮಟ್ಟದ ಹಿಂದುಳಿದ ವರ್ಗಗಳ ಅಧಿಕಾರಿಗಳು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Call Now Button