ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸಚಿವ ಸಂಪುಟ ಸಭೆ ಕೆಲ ಬದಲಾವಣೆಗಳೊಂದಿಗೆ ಅಂಗೀಕರಿಸಿದೆ. ಈ ಸಂಬಂಧ ಇಂದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ವಿಸ್ತೃತವಾಗಿ ಮಾತನಾಡಿದ್ದು, ತಮ್ಮ ಸರ್ಕಾರದ ನಿಲುವು, ಒಳ ಮೀಸಲಾತಿಯ ಅಗತ್ಯ, ಇದರಿಂದ ಆಗುವ ಸಾಮಾಜಿಕ ಬದಲಾವಣೆ ಮುಂತಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅವರ ಮಾತುಗಳಲ್ಲಿನ ಮುಖ್ಯ ಹತ್ತು ಅಂಶಗಳನ್ನು ಇಲ್ಲಿ ಕ್ರೂಢಿಕರಿಸಲಾಗಿದೆ.
- ಸಂವಿಧಾನದ ಅನುಚ್ಚೇದ 14, 15 ಮತ್ತು 16 ರಲ್ಲಿ ತಿಳಿಯಪಡಿಸಿರುವ ಸಮಾನತೆಯ ತತ್ವಕ್ಕೆ ಯಾವುದೇ ಚ್ಯುತಿ ಬಾರದಂತೆ ಅದರ ಮೂಲ ಆಶಯವನ್ನು ಸದೃಢಗೊಳಿಸುವ ದೃಷ್ಟಿಯಿಂದ ಒಳ ಮೀಸಲಾತಿ ವ್ಯವಸ್ಥೆ ಕಲ್ಪಿಸಬಹುದು ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿದೆ. ಅದರಂತೆ ನಾವು ರಾಜ್ಯದಲ್ಲಿ ಒಳ ಮೀಸಲಾತಿ ಕಲ್ಪಿಸುತ್ತಿದ್ದೇವೆ.
- ನಮ್ಮ ಸರ್ಕಾರವು ನವೆಂಬರ್ 12, 2024ರಂದು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಿ ಸೂಕ್ತ ದತ್ತಾಂಶಗಳನ್ನು ಸಂಗ್ರಹಿಸಿ, ಒಳ ಮೀಸಲಾತಿ ನೀಡುವ ಕುರಿತು ವಿವರವಾದ ಶಿಫಾರಸ್ಸುಗಳನ್ನು ಮಾಡಲು ಕೋರಲಾಯಿತು.
- ನಾಗಮೋಹನ್‌ದಾಸ್ ಅವರ ಆಯೋಗವು ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ಅಧ್ಯಯನ ಮಾಡಿ ಆಗಸ್ಟ್ 1, 2025ರಂದು ನಮ್ಮ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ಆಯೋಗವು ಪರಿಶಿಷ್ಟ ಜಾತಿಗಳಿಗೆ ಸೇರಿದ ಶೇ. 93 ರಷ್ಟು ಜನರನ್ನು ಸಮೀಕ್ಷೆಗೆ ಒಳಪಡಿಸಿ ವರದಿ ನೀಡಿದು. ಈ ವರದಿಯನ್ನು ಸರ್ಕಾರ ಕೂಲಂಕಶವಾಗಿ ಪರಿಶೀಲಿಸಿದೆ.
- ಆ.19, 2025 ರಂದು ನಡೆದ ಸಚಿವ ಸಂಪುಟದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ಶಿಫಾರಸ್ಸುಗಳನ್ನು ಕೆಲವು ಮಾರ್ಪಾಟುಗಳೊಂದಿಗೆ ನಮ್ಮ ಸರ್ಕಾರವು ಅಂಗೀಕರಿಸಿ, ಪರಿಶಿಷ್ಟ ಜಾತಿಯ ಹಲವು ದಶಕಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಿದೆ.
- ಎಡಗೈ ಸಂಬಂಧಿತ ಜಾತಿಗಳೆಂದು ಆಯೋಗವು ಗುರ್ತಿಸಿರುವ ಸಮುದಾಯಗಳಿಗೆ ಶೇ.6 ರಷ್ಟು ಒಳಮೀಸಲಾತಿ, ಬಲಗೈ ಸಮುದಾಯಕ್ಕೆ ಶೇ.6 ರಷ್ಟು ಒಳಮೀಸಲಾತಿ ಕಲ್ಪಿಸಲು ತೀರ್ಮಾನಿಸಿದ್ದೇವೆ.
- ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಪರಯ, ಮೊಗೇರ ಮುಂತಾದ ಬಲಗೈ ಸಂಬಂಧಿತ ಜಾತಿಗಳನ್ನು ಎಡಗೈ ಸಂಬಂಧಿತ ಜಾತಿಗಳ ಜೊತೆ ಸೇರಿಸಲಾಗಿದೆ ಎಂಬುದನ್ನು ಗಮನಿಸಿದ ಸಚಿವ ಸಂಪುಟವು ಈ ಜಾತಿಗಳನ್ನು ಬಲಗೈ ಸಂಬಂಧಿತ ಜಾತಿಗಳ ಜೊತೆ ಸೇರಿಸಿದೆ.
- ಸ್ಪೃಶ್ಯ ಜಾತಿಗಳ ಗುಂಪಿಗೆ ಶೇ.4 ರಷ್ಟು ಮೀಸಲಾತಿಯನ್ನು ಶಿಫಾರಸ್ಸು ಮಾಡಲಾಗಿತ್ತು. ಹಾಗೆಯೇ 59 ಜಾತಿಗಳನ್ನು ಪ್ರವರ್ಗ-ಎ ಎಂದು ತೀರ್ಮಾನಿಸಿ ಶೇ. 1 ರಷ್ಟು ಮೀಸಲಾತಿ ಶಿಫಾರಸ್ಸು ಮಾಡಿದ್ದರು. ಈ ಎರಡೂ ಗುಂಪುಗಳನ್ನು ಒಟ್ಟಿಗೆ ಸೇರಿಸಿ ಶೇ.5 ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದ್ದೇವೆ.
- ಆಯೋಗವು ಎ,ಬಿ,ಸಿ,ಡಿ,ಇ ಎಂದು ಪ್ರವರ್ಗಗಳನ್ನಾಗಿ ವಿಭಾಗೀಕರಿಸಿ ಮಾಡಿದ್ದ ಶಿಫಾರಸ್ಸನ್ನು ಸಚಿವ ಸಂಪುಟವು ಎ,ಬಿ,ಸಿ ಎಂದು ಮೂರು ಪ್ರವರ್ಗಗಳನ್ನಾಗಿ ವಿಭಾಗೀಕರಿಸಲು ಒಳಮೀಸಲು ಹಂಚಿಕೆ ಮಾಡಿದೆ.
- ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚಿಸಲು ತೀರ್ಮಾನಿಸಿದ್ದೇವೆ. ಜೊತೆಗೆ ಒಳ ಮೀಸಲಾತಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ತೀರ್ಮಾನಿಸಿದ್ದೇವೆ.
- ಒಳ ಮೀಸಲಾತಿಯ ಕುರಿತಂತೆ ಆದೇಶ ಹೊರಡಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಹಾಗೂ ಒಂದು ಬಾರಿಗೆ ವಯೋಮಿತಿ ಸಡಿಲಿಸಲು ತೀರ್ಮಾನಿಸಿದ್ದೇವೆ. ಸರ್ಕಾರವು ಈಗ ಕೈಗೊಂಡಿರುವ ತೀರ್ಮಾನದಲ್ಲಿ ಯಾವುದಾದರೂ ಮಾರ್ಪಾಡುಗಳ ಅಗತ್ಯತೆ ಕಂಡುಬಂದರೆ ಅವುಗಳನ್ನು ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿನ ಅಂಕಿ-ಅಂಶಗಳನ್ನು ಆಧರಿಸಿ ಬದಲಾವಣೆಗೆ ಒಳಪಡಿಸುವ ಷರತ್ತಿಗೆ ಬದ್ಧವಾಗಿದ್ದೇವೆ.
ನಮ್ಮ ಈ ತೀರ್ಮಾನವು ಒಳ ಮೀಸಲಾತಿ ಕುರಿತ ದಶಕಗಳ ಹೋರಾಟಕ್ಕೆ ನ್ಯಾಯ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇವೆ. ಅಭಿವೃದ್ಧಿಶೀಲ ರಾಜ್ಯವಾದ ಕರ್ನಾಟಕವು ಸಾಮಾಜಿಕ ನ್ಯಾಯದ ವಿಚಾರದಲ್ಲೂ ಮುಂಚೂಣಿಯಲ್ಲಿದೆ ಎಂಬುದನ್ನು ನಮ್ಮ ಸರ್ಕಾರವು ಸಾಬೀತು ಮಾಡಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ


