ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನ ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ತಿಮರೋಡಿ ಬಿ.ಎಲ್. ಸಂತೋಷ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್ ಕುಲಾಲ್ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BSN 196 (1), 352, 353 (2) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಭಾರೀ ಹೈಡ್ರಾಮಾದ ಬಳಿಕ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 8 ವಾಹನಗಳಲ್ಲಿ ಉಜಿರೆ ಬಳಿಯ ತಿಮರೋಡಿಯ ನಿವಾಸಕ್ಕೆ ತೆರಳಿದ್ದ ಸುಮಾರು 30 ಪೊಲೀಸರ ತಂಡ ಅವರ ಮನೆಯಲ್ಲೇ ಮಹೇಶ್ ಶೆಟ್ಟಿ ಅವರನ್ನು ವಶಕ್ಕೆ ಪಡೆದಿದೆ.
ಇದಕ್ಕೂ ಮುನ್ನ ಮನೆಯ ಮುಂಭಾಗ ದೊಡ್ಡಮಟ್ಟದಲ್ಲಿ ಜಮಾಯಿಸಿದ್ದ ಮಹೇಶ್ ಶೆಟ್ಟಿ ಬೆಂಬಲಿಗರು ಅವರನ್ನು ಬಂಧಿಸದಂತೆ ಆಗ್ರಹಿಸಿ ದೊಡ್ಡ ಹೈಡ್ರಾಮಾ ಸೃಷ್ಟಿ ಮಾಡಿದ್ದರು. ಏನೇ ವಿಚಾರಣೆ ಇದ್ದರೂ ಇಲ್ಲೇ ನಡೆಸಿ, ಯಾವುದೇ ಕಾರಣಕ್ಕೂ ಬಂಧಿಸುವುದಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಗಿರೀಶ್ ಮಟ್ಟಣ್ಣನವರ್ ಕೂಡ ಕಾರಣ ಕೇಳಿ ಪೊಲೀಸರೊಂದಿಗೆ ವಾಗ್ದಾದ ನಡೆಸಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನ ವಶಕ್ಕೆ ಪಡೆದು ಖಾಸಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹೇಶ್ ಶೆಟ್ಟಿ ಎಸ್ ಐಟಿ ತನಿಖೆ ಮುಚ್ಚಿಸಲು ಬಿಜೆಪಿಯವರು ಮಾಡಿರುವ ಷಡ್ಯಂತ್ರ ಇದು. ನನಗೆ ಏನಾದರೂ ಆದರೆ ಅದಕ್ಕೆ ಸರ್ಕಾರ ಮತ್ತು ಬಿಜೆಪಿಯವರು ಕಾರಣ ಎಂದು ತಿಳಿಸಿದ್ದಾರೆ.
ಇನ್ನು ಮಹೇಶ್ ಶೆಟ್ಟಿ ಅವರನ್ನು ಬಂಧಿಸಿರುವ ಬ್ರಹ್ಮಾವರ ಠಾಣೆಯ ಮುಂಭಾಗದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಠಾಣೆಯ ಸುತ್ತಲೂ ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.


