Online News in ಕನ್ನಡ

GST ತೆರಿಗೆ ಸಂಬಂಧ ಕರ್ನಾಟಕ ಸೇರಿ ಎಂಟು ರಾಜ್ಯಗಳಿಂದ ಮಹತ್ವದ ಸಭೆ

ನವದೆಹಲಿ:  ಜಿ.ಎಸ್.ಟಿ ತೆರಿಗೆ ದರ ಬದಲಾವಣೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಕರ್ನಾಟಕ, ಹಿಮಾಚಲ ಪ್ರದೇಶ, ಜಾಖರ್ಂಡ್, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಎಂಟು ರಾಜ್ಯಗಳ ಮಂತ್ರಿಗಳು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಹಾಜರಿದ್ದ ಎಲ್ಲಾ ಮಂತ್ರಿಗಳು ಮತ್ತು ಪ್ರತಿನಿಧಿಗಳು, ಕೇಂದ್ರ ಸರ್ಕಾರದ ಪ್ರಸ್ತುತ ಪ್ರಸ್ತಾವನೆಯಿಂದ ರಾಜ್ಯಗಳಿಗೆ ಉಂಟಾಗಬಹುದಾದ ಗಣನೀಯ ಪ್ರಮಾಣದ ರಾಜಸ್ವ ನಷ್ಟದ ಬಗ್ಗೆ ತೀವ್ರ ಕಳಕಳಿಯನ್ನು ವ್ಯಕ್ತಪಡಿಸಿದರು.

ತರುವಾಯ ಸಭೆಯಲ್ಲಿ ಹಾಜರಿದ್ದ ಎಂಟು ರಾಜ್ಯ ಸರ್ಕಾರಗಳ ಕರಡು ಪ್ರಸ್ತಾವನೆಯ ಕುರಿತು ವಿವರವಾದ ಚರ್ಚೆ ನಡೆಯಿತು.

  • ಚರ್ಚೆಯ ಪ್ರಮುಖ ಅಂಶಗಳು
  • ರಾಜ್ಯಗಳಿಗೆ ಆದಾಯ ರಕ್ಷಣೆಯನ್ನು ಖಾತರಿಪಡಿಸಲು ಜಿ.ಎಸ್.ಟಿ. (ರಾಜ್ಯಗಳಿಗೆ ಪರಿಹಾರ) ಕಾಯ್ದೆ, 2017 ಅನ್ನು ಜಾರಿಗೆ ತರಲಾಯಿತು. ರಾಜ್ಯಗಳ ಹಣಕಾಸಿನ ಅಧಿಕಾರಗಳನ್ನು ಗಮನಾರ್ಹವಾಗಿ ಜಿ.ಎಸ್.ಟಿ.ಯು ತನ್ನೊಳಗೆ ವಿಲೀನಗೊಳಿಸಿಕೊಳ್ಳುತ್ತದೆ ಮತ್ತು ಸಹಕಾರಿ ಒಕ್ಕೂಟವನ್ನು ಸಂರಕ್ಷಿಸಲು ಪರಿಹಾರ ಕಾರ್ಯವಿಧಾನವು ಅತ್ಯಗತ್ಯವಾಗಿ ಬೇಕಾಗುತ್ತದೆ ಎಂಬ ಅಂಶವು ಆಗಲೇ ಸ್ಪಷ್ಟವಾಗಿತ್ತು.
  • ಜುಲೈ 2017 ರಲ್ಲಿ ಕಾಯ್ದೆ ಜಾರಿಯಾದಾಗಿನಿಂದ ಜಿ.ಎಸ್.ಟಿ.ಯಲ್ಲಿ ಹಲವಾರು ಬಾರಿ ದರಗಳ ಬದಲಾವಣೆ ಆಗಿದೆ. ಕೇಂದ್ರ ಸರ್ಕಾರದ ಈಗಿನ ಪ್ರಸ್ತಾವನೆಯು ದರ ಹಂತಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ಮತ್ತು ಹಲವು ಬಾಬ್ತುಗಳನ್ನು ಕೆಳಹಂತಗಳಿಗೆ ತರುವ ಪ್ರಕ್ರಿಯೆಗೆ ಸಂಬಂಧಿಸಿದ್ದು ಒಟ್ಟಾರೆ ಜಿ.ಎಸ್.ಟಿ. ದರಗಳ ಸಂರಚನೆಯನ್ನು ಸರಳೀಕರಿಸುವುದಕ್ಕೆ ಸಂಬಂಧಿಸಿರುತ್ತದೆ. ಇದರಿಂದ ರಾಜ್ಯಗಳಿಗೆ ಆದಾಯ ನಷ್ಟವಾಗಲಿದೆ.
  • ಆದಾಯ ನಷ್ಟಗಳನ್ನು ಸರಿದೂಗಿಸಲು ನಿರೀಕ್ಷಿಸಲಾದ ಪ್ಲವನತೆಯು (buoyancy) ಕಾರ್ಯರೂಪಕ್ಕೆ ಬಂದಿಲ್ಲವಾದ್ದರಿಂದ ರಾಜ್ಯದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದರಗಳ ಕಡಿತದಿಂದ ಆರ್ಥಿಕ ವರ್ಷ 2018 ಮತ್ತು 2024ರ ನಡುವೆ ನಿವ್ವಳ ಪರಿಣಾಮಕಾರಿ ಜಿ.ಎಸ್.ಟಿ. ದರವು ಶೇ.14.4 ರಿಂದ ಶೇ.11.6ಕ್ಕೆ ಕುಸಿದಿದೆ ಎಂಬುದಾಗಿ ಅಂದಾಜಿಸಲಾಗಿದೆ.
  • ಜಿ.ಎಸ್.ಟಿ. ಆದಾಯ (ಮರುಪಾವತಿ ನಂತರದ) ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ, ಜಿ.ಎಸ್.ಟಿ. ಪೂರ್ವ ಯುಗದಲ್ಲಿ ದಾಖಲಾದ ಮಟ್ಟವನ್ನು ಇನ್ನೂ ಮೀರಿಲ್ಲ. ಈಗಿನ ಪ್ರಸ್ತಾವನೆಯಿಂದ ನಿವ್ವಳ ಪರಿಣಾಮಕಾರಿ ಜಿ.ಎಸ್.ಟಿ. ದರವು ಶೇ.10ರ ಮಿತಿಗಿಂತಲೂ ಕೆಳಗೆ ಕುಸಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.
  • ಜಿಎಸ್‌ ಟಿ ದರ ಪಟ್ಟಿ ಬದಲಾವಣೆ ನಂತರ ಆದಾಯ ಕೊರತೆಯ ಸಾಧ್ಯತೆ ಗಣನೀಯವಾಗಿ ಹೆಚ್ಚುವುದರಿಂದ, ರಾಜ್ಯಗಳ ಹಣಕಾಸಿನ ಹಿತಾಸಕ್ತಿಗಳನ್ನು ಕಾಪಾಡಲು ಸ್ಪಷ್ಟ ಸುರಕ್ಷತಾ ಕ್ರಮಗಳನ್ನು ಕೇಂದ್ರ ಒಳಗೊಂಡಿರಬೇಕು.
  • ರಾಜ್ಯಗಳು ಜಿ.ಎಸ್.ಟಿ.ಯನ್ನೇ ತಮ್ಮ ಆದಾಯದ ಮೂಲ ಆಧಾರವಾಗಿ ಹೆಚ್ಚಾಗಿ ಅವಲಂಬಿಸಿವೆ. ಆದರೆ ಕೇಂದ್ರ ಸರ್ಕಾರದ ಸ್ಥಿತಿ ಹಾಗಲ್ಲ. ಅದಕ್ಕೆ ನೇರ ತೆರಿಗೆ, ಸಾರ್ವಜನಿಕ ಉದ್ದಿಮೆಗಳ ಡಿವಿಡೆಂಡ್ (ಲಾಭಾಂಶ), ಕಸ್ಟಮ್ಸ್ ಮತ್ತು ಅಬಕಾರಿ ಸುಂಕಗಳು, ಸೆಸ್ ಮತ್ತು ಸರಛಾರ್ಜ್ ತರಹದ ಹಲವು ಆದಾಯದ ಮೂಲಗಳಿವೆ.
  • ಕೇಂದ್ರದ ಜಿಎಸ್ಟಿ ಸಂಗ್ರಹಗಳು ಅದರ ಸ್ವಂತ ತೆರಿಗೆ ಆದಾಯದ ಸುಮಾರು ಶೇಕಡ 28 ರವರೆಗೆ ಹೊಂದಿವೆ, ಆದರೆ ರಾಜ್ಯಗಳು ಜಿ.ಎಸ್.ಟಿ.ಯನ್ನು ಹೆಚ್ಚಾಗಿ ಅವಲಂಬಿಸಿವೆ. ಇದು ಅವುಗಳ ಸ್ವಂತ ತೆರಿಗೆ ಆದಾಯದ ಅರ್ಧದಷ್ಟು ಭಾಗವನ್ನು ಹೊಂದಿರಬಹುದು. ಆದ್ದರಿಂದ, ದರಗಳಲ್ಲಿ ಕಡಿತವು ರಾಜ್ಯಗಳ ಆದಾಯ ಸ್ವೀಕೃತಿಗಳಲ್ಲಿ ಮಹತ್ವದ ಅನಿಶ್ಚಿತತೆಯನ್ನು ಉಂಟುಮಾಡುತ್ತದೆ ಮತ್ತು ಅವುಗಳ ಹಣಕಾಸು ಸ್ಥಿರತೆಯನ್ನು ಹದಗೆಡಿಸುತ್ತದೆ.
  • ಹಲವು ಹಣಕಾಸು ಸಂಶೋಧನಾ ಕೇಂದ್ರಗಳು ನೀಡಿರುವ ಅಂದಾಜಿನ ಮಾಹಿತಿಯಂತೆ ಇದು ವಾರ್ಷಿಕವಾಗಿ ರೂ.85,000 ಕೋಟಿಗಳಿಂದ ರೂ.2,00,000 ಕೋಟಿಗಳಿಗೂ ಮೀರುತ್ತದೆ. ರಾಜ್ಯಗಳಿಗೆ ಅವುಗಳ ಹಣಕಾಸು ಯೋಜನೆ ಮತ್ತು ಆರ್ಥಿಕ ನಿಯಂತ್ರಣದ ಮೇಲೆ ಗಮನಾರ್ಹ ಅನಿಶ್ಚಿತತೆಯನ್ನು ಈ ಅಸ್ಪಷ್ಟತೆಯು ತಂದೊಡ್ಡಿದೆ.
Call Now Button