ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ದಿ. ವಿಷ್ಣುವರ್ಧನ್ ಅವರಿಗೆ ಸರ್ಕಾರದಿಂದ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂದು ಸಾಕಷ್ಟು ಅಭಿಮಾನಿಗಳು ಈಗಲೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಟನ ಯುಗಾಂತ್ಯವಾದ ಬಳಿಕ ಸರ್ಕಾರ ಅವರಿಗೆ ಸ್ಮಾರಕ ನಿರ್ಮಾಣ ಮಾಡುವಲ್ಲಿಯೂ ನಿಧಾನ ಮಾಡಿತು, ಪ್ರಶಸ್ತಿಗಳನ್ನು ನೀಡುವ ವಿಚಾರದಲ್ಲಿಯೂ ತಾರತಮ್ಯ ಮಾಡಿತು ಎನ್ನುವ ಆರೋಪಗಳು ಈಗಲೂ ಇವೆ. ಇದೇ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ನಟಿಯರಾದ ಜಯಮಾಲ, ಶ್ರುತಿ, ಮಾಳವಿಕ ಅವಿನಾಶ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.
ಇದೀಗ ವಿಷ್ಣುವರ್ಧನ್ ಪತ್ನಿ, ನಟಿ ಭಾರತಿ ವಿಷ್ಣುವರ್ಧನ್ ಮತ್ತು ನಟ ಅನಿರುದ್ಧ್ ಇಬ್ಬರೂ ಸಿಎಂ ಅವನ್ನು ಭೇಟಿಯಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಹತ್ತು ಗುಂಟೆ ಜಾಗ ನೀಡಿ, ಅಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇದು ಅಭಿಮಾನಿಗಳಿಗೂ ಸಂತೋಷ ತಂದಿದೆ. ಆದರೆ ಪ್ರಶ್ನೆ ಇರುವುದು, ಈ ಹಿಂದೆ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ವಿರೋಧ ಮಾಡಿದ್ದ ಕುಟುಂಬಸ್ಥರಿಗೆ ಈಗ ಅಲ್ಲಿ ಪುಟ್ಟ ಸ್ಮಾರಕ ಮಾಡಬೇಕು ಎನ್ನುವ ಆಸೆ ಹುಟ್ಟಿಕೊಂಡಿದ್ದಾದರೂ ಏಕೆ ಎಂದು.!
ವಿಷ್ಣುವರ್ಧನ್ ನಿಧನದ ಬಳಿಕ ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳ ನಡುವೆ ದೊಡ್ಡ ಮಟ್ಟದ ತಿಕ್ಕಾಟವೇ ನಡೆದು ಎರಡು ಗುಂಪುಗಳು ರಚನೆಯಾಗಿದ್ದವು. ಒಂದು ಗುಂಪು ವಿಷ್ಣು ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ಮಾಡಬೇಕು ಎಂದರೆ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬಸ್ಥರು ಮೈಸೂರಿನಲ್ಲಿ ವಿಶಾಲವಾದ ಜಾಗದಲ್ಲಿ ವಿಷ್ಣು ಸ್ಮಾರಕ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಕಡೆಗೆ ವಿಷ್ಣು ಕುಟುಂಬದ ಆಸೆಯೇ ನೆರವೇರಿತು. ಮೈಸೂರಿನ ಎಚ್.ಡಿ,ಕೋಟೆ ರಸ್ತೆಯ ತಳೂರಿನ ಬಳಿ ವಿಶಾಲವಾದ ಮೂರು ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಯಿತು. ಅಲ್ಲಿಗೆ ಎಲ್ಲವೂ ಸುಖಾಂತ್ಯ ಆಯಿತು ಎಂದುಕೊಳ್ಳುವಾಗ ಮತ್ತೊಂದು ಗೊಂದಲ ಸೃಷ್ಟಿಯಾಗಿತ್ತು.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿತ್ತು. ಪದ್ದತಿಯಂತೆ ಅಲ್ಲಿ ಅಭಿಮಾನಿಗಳೇ ಸೇರಿ ಪುಟ್ಟದಾಗಿ ಮಂಟಪವೊಂದನ್ನು ಕಟ್ಟಿ ಅಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿಕೊಂಡು ಬಂದಿದ್ದರು. ಆದರೆ ತಿಂಗಳ ಹಿಂದೆ ಹಿರಿಯ ನಟ ದಿ. ಬಾಲಕೃಷ್ಣ ಅವರ ಮಗ ಅಭಿಮಾನ್ ಸ್ಟುಡಿಯೋ ಜಾಗ ನನಗೆ ಸೇರಬೇಕು ಎಂದು ಅಲ್ಲಿದ ವಿಷ್ಣು ಸಮಾಧಿಯನ್ನು ಏಕಾಏಕಿ ತೆರೆವು ಮಾಡಿಸಿದ್ದರು. ಇದು ವಿವಾದದ ಸ್ವರೂಪ ಪಡೆದುಕೊಂಡು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅಸಲಿಗೆ ಅದು ಸರ್ಕಾರಿ ಭೂಮಿಯಾಗಿದ್ದು, ಅದರ ಮೇಲೆ ಹಕ್ಕು ಸ್ಥಾಪನೆ ಮಾಡಲು ಬಾಲಕೃಷ್ಣ ಅವರ ಮಗ ಮುಂದಾಗಿದ್ದ. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಕೂಡಲೇ ಆ ಜಾಗವನ್ನು ತನ್ನ ವಶಕ್ಕೆ ಪಡೆದು ಆದೇಶ ಹೊರಡಿಸಿತು.


ಇದಾದ ಮೇಲೆ ಕಿಚ್ಚ ಸುದೀಪ್ ಕೆಂಗೇರಿ ಸಮೀಪದಲ್ಲಿಯೇ ಹತ್ತು ಗುಂಟೆ ಜಾಗವನ್ನು ಖರೀದಿ ಮಾಡಿ, ಅಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಪ್ರಕಟಿಸಿದರು. ಅಲ್ಲಿಯವರೆಗೂ ವಿಷ್ಣು ಕುಟುಂಬಸ್ಥರು ಸುಮ್ಮನೇ ಇದ್ದರು. ಯಾಕೆಂದರೆ ಅವರಿಗೆ ಅವರು ಅಂದುಕೊಂಡ ಹಾಗೆ ಸ್ಮಾರಕ ಮೈಸೂರಿನಲ್ಲಿ ಆಗಿತ್ತು. ಈಗ ಅಭಿಮಾನ್ ಸ್ಟುಡಿಯೋ ಜಾಗವನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದ ಬಳಿಕ ಅಭಿಮಾನ್ ಸ್ಟುಡಿಯೋದಲ್ಲಿಯೂ ಹತ್ತು ಗುಂಟೆ ಜಾಗ ನೀಡಿ ಎಂದು ಮನವಿ ಮಾಡಿದೆ.
ಇದನ್ನು ನೋಡಿದರೆ ವಿಷ್ಣು ಕುಟುಂಬಸ್ಥರ ಇಬ್ಬಂದಿತನ ಜಗಜ್ಜಾಹೀರು ಆಗಿದೆ. ಒಬ್ಬ ನಟನಿಗೆ ಸರ್ಕಾರ ಒಂದು ಕಡೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ಮಾರಕ ಮಾಡಿ ಗೌರವ ಸಲ್ಲಿಸಿದ ಮೇಲೆ ಮತ್ತೊಂದು ಕಡೆಯೂ ಜಾಗ ನೀಡಿ, ಸ್ಮಾರಕ ಮಾಡಿ ಎನ್ನುವುದು ಎಲ್ಲಿಯ ನ್ಯಾಯ. ಹಾಗಿದ್ದರೆ ಸಾರ್ವಜನಿಕರು ಕಟ್ಟುವ ತೆರಿಗೆ ಹಣಕ್ಕೆ ಬೆಲೆ ಇಲ್ಲವೇ..?
ಇದೀಗ ವರಸೆ ಬದಲಾಯಿಸಿ ಅಭಿಮಾನಿಗಳಿಗಾಗಿ ಸ್ಟುಡಿಯೋದಲ್ಲಿ ಜಾಗ ಕೊಡಿ ಎಂದು ಕೇಳಿದ್ದೇವೆ. ಅಭಿಮಾನಿಗಳು ಬಂದು ನಮಸ್ಕಾರ ಮಾಡಿ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕು. ಒಟ್ಟಿನಲ್ಲಿ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ..!


