Online News in ಕನ್ನಡ

ಲಿಂಗತ್ವ ಅಲ್ಪಸಂಖ್ಯಾತರು, ದೇವದಾಸಿಯರ ಮರು ಸಮೀಕ್ಷೆ; ಪೋಸ್ಟರ್‌ ಲಾಂಚ್‌

ಬೆಂಗಳೂರು: ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಹಾಗೂ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಗಳ ಪೋಸ್ಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಸಮೀಕ್ಷೆ ನಡೆಯುತ್ತಿದ್ದು, ಮೊದಲ ಬಾರಿಗೆ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯಲ್ಲಿ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಸಮೀಕ್ಷೆಗಳನ್ನು ನಡೆಸಲಾಗುವುದು. ಸಮೀಕ್ಷೆಯ ಆಧಾರದ ಮೇಲೆ ಈ ವರ್ಗದ ಜನರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ, ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಆಗಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹೀಗಾಗಿ ಸಮೀಕ್ಷೆ ಬಗ್ಗೆ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ದೇವದಾಸಿ ಮಹಿಳಾ ಸಮುದಾಯದಲ್ಲಿ ಅಪಾರ ನಿರೀಕ್ಷೆಗಳು ಮನೆ ಮಾಡಿವೆ.
ಪೋಸ್ಟರ್‌ ಬಿಡುಗಡೆ ವೇಳೆ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪದ್ಮಾವತಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಬಾಬು, ಹಿರಿಯ ಅಧಿಕಾರಿಗಳು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
Call Now Button