ಬೆಂಗಳೂರು: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದಿರುವ ಕಲ್ಲುತೂರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ಇಡೀ ಮದ್ದೂರು ಬಂದ್ ಆಗಿತ್ತು. ಇದರೊಂದಿಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಘಟನೆಯನ್ನು ಖಂಡಿಸಿದ್ದು, ಒಂದು ಕೋಮಿನವರಿಂದಲೇ ಇದೆಲ್ಲಾ ಆಗಿದೆ ಎನ್ನುವ ಆರೋಪ ಮಾಡಿವೆ. ಮತ್ತೊಂದೆಡೆ ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ಸಿಎಂ ಮತ್ತು ಗೃಹ ಸಚಿವರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ನಾಳೆ ಬಿಜೆಪಿ ನಿಯೋಗವು ಮದ್ದೂರಿಗೆ ಭೇಟಿ ನೀಡಲಿದೆ.
ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಈಗಾಗಲೇ ಸತ್ಯಶೋಧನಾ ತಂಡವನ್ನು ರಚನೆ ಮಾಡಿದೆ. ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಮಂಜುಳಾ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ವೆಂಕಟೇಶ್ ದೊಡ್ಡೇರಿ, ವಿಜಯ್ ಪ್ರಸಾದ್ ಅವರು ತಂಡದಲ್ಲಿ ಇದ್ದಾರೆ. ಇವರು ಮದ್ದೂರು ಗಲಭೆ ಬಗ್ಗೆ ಸತ್ಯಶೋಧನೆ ಮಾಡಿ ವರದಿ ನೀಡಬೇಕು ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಇದರ ಜೊತೆಗೆ ನಾಳೆ ವಿಜಯೇಂದ್ರ ನೇತೃತ್ವದಲ್ಲಿ ನಿಯೋಗವು ಗಲಭೆ ನಡೆದ ಸ್ಥಳ, ಲಾಠಿಚಾರ್ಚ್ ನಡೆದ ಪ್ರದೇಶಕ್ಕೆ ಭೇಟಿ ನೀಡಲಿದೆ.



