ಮೈಸೂರು: ಮಾಜಿ ಪತ್ರಕರ್ತ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಕಾರ್ಯನಿರತ ಪತ್ರಕರ್ತನಿಗೆ ಅಪಮಾನ ಮಾಡಿದ್ದು, ಈ ನಡೆಗೆ ಪತ್ರಕರ್ತರು ಮತ್ತು ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು, ಇದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದರು. ಇದಕ್ಕೆ ಪೊಲೀಸರು ಅನುಮತಿ ಕೊಡದ ಕಾರಣ ಕುರುಬಾರಹಳ್ಳಿ ಸರ್ಕಲ್ ಬಳಿಯೇ ಕಾರ್ಯಕರ್ತರನ್ನು ತಡೆಯಲಾಗಿತ್ತು. ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ವಾರ್ತಾ ಭಾರತಿ ಪತ್ರಿಕೆಯ ಹಿರಿಯ ವರದಿಗಾರ ನೇರಳೆ ಸತೀಶ್ ಕುಮಾರ್ ಅವರು ನಿಮಗೆ ಮಾಡಲು ಕೆಲಸವಿಲ್ಲ, ಬಿಜೆಪಿಯವರು ಕಿತ್ತು ಬಿಸಾಕಿದ್ದಾರೆ. ಅಸ್ತಿತ್ವ ಉಳಿಸಿಕೊಳ್ಳಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರ ಕೊಡಲು ಆಗದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಸತೀಶ್ ಅಂತ ಒಬ್ಬ ರಿಪೋರ್ಟರ್ ಇದ್ದಾನೆ. ಅವನ ಪ್ರಶ್ನೆಗೆ ಮೂರು ಕಾಸಿನ ಬೆಲೆ ಇಲ್ಲ, ಅವನ ಪ್ರಶ್ನೆಯನ್ನೂ ನಾನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಉದ್ಧಟತನ ಮೆರೆದಿದ್ದಾರೆ.
ಪ್ರತಾಪ್ ಸಿಂಹ ನಡೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಹಿರಿಯ ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ. ದೀಪಕ್, ಪ್ರತಾಪ್ ಸಿಂಹನಿಗೆ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಅವರು ಸದ್ಯ ಹಾಲಿ ಸಂಸದ ಯದುವೀರ್ ಅವರ ಮನೆಗೆ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಳ್ಳಲಿ, ಆಗ ಒಬ್ಬ ಸಂಸದರು ಸಾರ್ವಜನಿಕವಾಗಿ, ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಗೆ ವರ್ತಿಸಬೇಕು ಎಂದು ತಿಳಿಯುತ್ತದೆ ಎಂದು ಸಲಹೆ ನೀಡಿದ್ದಾರೆ. ಮುಂದುವರೆದು, ಮೈಸೂರಿನಲ್ಲಿ ಯಾರೂ ಬೂಟು ನೆಕ್ಕುವ ಪತ್ರಕರ್ತರು ಇಲ್ಲ. ಹಾಗೊಂದು ವೇಳೆ ನಿಮ್ಮ ಬೂಟು ನೆಕ್ಕುವವರು ಇದ್ದರೆ ಅವರ ಹೆಸರನ್ನು ಬಹಿರಂಗ ಮಾಡಿ ಎಂದು ಸವಾಲು ಹಾಕಿದ್ದಾರೆ. ನರೇಂದ್ರ ಮೋದಿ ಅಲೆಯಲ್ಲಿ ಗೆದ್ದ ನಿನಗೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡದೇ ಇರಲು ಮೈಸೂರಿನ ಜನತೆ ನಿನಗೆ ಮೂರು ಕಾಸಿನ ಬೆಲೆ ಕೊಡುತ್ತಿಲ್ಲ ಎನ್ನುವ ವರದಿ ನಿಮ್ಮ ಹೈಕಮಾಂಡ್ ಗೆ ಹೋಗಿದ್ದಕ್ಕಾಗಿ. ಇದನ್ನೆಲ್ಲಾ ಮರೆದು ಮಾತನಾಡುತ್ತಿದ್ದೀಯ, ಇನ್ನಾದರೂ ಪತ್ರಕರ್ತರೊಂದಿಗೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿತುಕೋ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಅವರು ಘಟನೆಯನ್ನು ಖಂಡಿಸಿದ್ದಾರೆ. ಮಾಜಿ ಅಧ್ಯಕ್ಷರಾದ ಸಿ.ಕೆ. ಮಹೇಂದ್ರ ಅವರು ಪ್ರತಾಪ್ ಸಿಂಹ ಕಾರ್ಯನಿರತ ಪತ್ರಕರ್ತರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ಹಿರಿಯ, ಕಿರಿಯ ಪತ್ರಕರ್ತರು ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಾಪ್ ಸಿಂಹ ನಡೆಯನ್ನು ಖಂಡಿಸಿದ್ದಾರೆ. ಸಾರ್ವಜನಿಕ ವಲಯ ಮತ್ತು ಬಿಜೆಪಿ ಪಾಳಯದಲ್ಲಿಯೂ ಪ್ರತಾಪ್ ಸಿಂಹ ನಡೆಗೆ ಕಟು ಟೀಕೆಗಳು ಕೇಳಿಬರುತ್ತಿವೆ.


