Online News in ಕನ್ನಡ

ಚಿತ್ರರಂಗ ಸಮಾಜಮುಖಿ ಕೆಲಸ ಮಾಡುತ್ತಿರುವ ಅತ್ಯಂತ ಪ್ರಭಾವಿ ಕ್ಷೇತ್ರ; ಎಚ್‌ ಸಿಎಂ

ಮೈಸೂರು: ಭಾರತದ ಜನ ಜೀವನದ ಮೇಲೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಶಕ್ತಿಗಳನ್ನು ಸೇರಿಸುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವ ಅತ್ಯಂತ ಪ್ರಭಾವಿ ಕ್ಷೇತ್ರ ಎಂದರೆ ಅದು ಚಲನಚಿತ್ರ ಕ್ಷೇತ್ರ. ತಮ್ಮ ರಚನೆ, ಸಂಗೀತ, ಸಾಹಿತ್ಯದ ಮೂಲಕ ಸಮಾಜದಲ್ಲಿ ಹೆಚ್ಚು ಜನಪ್ರಿಯತೆಯನ್ನು ಚಲನಚಿತ್ರ ಕ್ಷೇತ್ರಗಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್. ಸಿ ಮಹದೇವಪ್ಪ ಅವರು ಹೇಳಿದರು.

ಇಂದು ಮಾಲ್ ಆಫ್ ಮೈಸೂರಿನ ನೆಲಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಚಲನಚಿತ್ರೋತ್ಸವ -2025 ವನ್ನು ಉದ್ಘಾಟಿಸಿ ಮಾತನಾಡಿದರು. ಸರೋಜಾ ದೇವಿ ಅವರು ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಸರು ಮಾಡಿ ಸಾಧನೆ ಮಾಡಿದ್ದಾರೆ. ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲಿ ತನ್ನದೇ ಆದಂತಹ ಗಂಭೀರತೆ ಮೂಲಕ ಜನರ ಮನಸನ್ನು ಗೆದ್ದಿದ್ದಾರೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನ ಮಾಡಲಾಗಿದೆ ಹಾಗೂ ಡಾ.ವಿಷ್ಣುವರ್ಧನ್ ಅವರಿಗೂ ನೀಡಲು ತೀರ್ಮಾನಿಸ ಲಾಗಿದೆ.ಸಮಾಜದ ಮೇಲೆ ನಡವಳಿಕೆಯ ಮೇಲೆ ಸಾಧಕರನ್ನು ಜೀವಂತವಾಗಿ ಇಡುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ದಸರಾ ಹಬ್ಬಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರ ಮಹತ್ವವಾದದ್ದು. ಅದರಂತೇ ನಾವೆಲ್ಲರೂ ಒಂದಾಗಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡುವುದರ ಮೂಲಕ ಈ ಚಲನಚಿತ್ರವನ್ನು ಉದ್ಘಾಟನೆ ಮಾಡಿದ್ದೇನೆ. ಇಲ್ಲಿ 84 ಸಿನಿಮಾಗಳ ಪ್ರದರ್ಶನ ಮಾಡಲಾಗುತ್ತಿದ್ದು, ಪ್ರೇಕ್ಷಕರು ಪ್ರತಿ ಚಿತ್ರವನ್ನು ವೀಕ್ಷಣೆ ಮಾಡಬೇಕು. ಎಲ್ಲರೂ ಮೈಸೂರು ಪ್ರಾಂತ್ಯವನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡೋಣ ಎಂದು ಹೇಳಿದರು.

ಸು ಫ್ರಂ ಸೋ ಖ್ಯಾತಿಯ ಚಲನಚಿತ್ರ ನಟಿಯಾದ ಸಂಧ್ಯಾ ಅರಕೆರೆ, ಚಲನಚಿತ್ರ ನಟ ಪೃಥ್ವಿ ಅಂಬರ್ ಮಾತನಾಡಿದರು. ಖ್ಯಾತ ಹಿನ್ನೆಲೆ ಗಾಯಕ ಜಸ್ಕರನ್ ಸಿಂಗ್ ಅವರು ಕೃಷ್ಣಂ ಪ್ರಣಯ ಸಖಿ ಚಿತ್ರದ ದ್ವಾಪರ ದಾಟುತ ನನ್ನನೆ ನೋಡಲು ನನ್ನನ್ನೇ ಸೇರಲು ಬಂದ ರಾಧಿಕೆ ಎಂಬ ಹಾಡು ಹೇಳುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ಕಲಾವಿದರು ನಿರ್ದೇಶಕರಿಗೆ ಸನ್ಮಾನ ಮಾಡಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಚಲನಚಿತ್ರೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಟಿ ಕೆ ಹರೀಶ್ ಅವರು ಸ್ವಾಗತಿಸಿದರು.

 

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ , ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ನ ಶಾಸಕರಾದ ಡಾ. ಡಿ ತಿಮ್ಮಯ್ಯ, ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು, ಚಲನಚಿತ್ರೋತ್ಸವ ಉಪ ಸಮಿತಿ ಉಪವಿಶೇಷಾಧಿಕಾರಿ ವಿಜಯ್ ಕುಮಾರ್, ಕಾರ್ಯಾಧ್ಯಕ್ಷೆ ಕೆ.ಶೋಭಾ. ಖ್ಯಾತ ಚಲನಚಿತ್ರ ನಟಿಯಾದ ಅಂಜಲಿ, ಖ್ಯಾತ ಸಂಗೀತ ನಿರ್ದೇಶಕರು ನಾಗಾರ್ಜುನ ಶರ್ಮಾ, ನೃತ್ಯ ನಿರ್ದೇಶಕರಾದ ಮುರುಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Call Now Button