Online News in ಕನ್ನಡ

ಹಾಸನ ಗಣಪತಿ ಮೆರವಣಿಗೆ ದುರಂತ; ಉಸ್ತುವಾರಿ ಸಚಿವ, ಸಂಸದರಿಂದ ಸಭೆ

ಹಾಸನ: ಗಣಪತಿ ಮೆರವಣಿಗೆ ವೇಳೆ ಟ್ರಕ್ ಹರಿದು ಒಂಭತ್ತು ಮಂದಿ ಸಾವನ್ನಪ್ಪಿರುವ ಘಟನೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡ ಇಂದು ಅಧಿಕಾರಿಗಳ ಸಭೆ ನಡೆಸಿದರು. ಇದರ ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.

ಸಭೆಯ ಬಳಿಕ ಮಾತನಾಡಿರುವ ಅವರು, ಹಾಸನ ಮೈಸೂರು ರಸ್ತೆ ರಾಷ್ಟ್ರೀಯ ಹೆದ್ದಾರಿ 373 ರ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಟ್ರಕ್‌ ಹರಿದು 9 ಜನ ಮೃತಪಟ್ಟಿದ್ದಾರೆ. ದುರಂತಕ್ಕೆ ಟ್ರಕ್ ಚಾಲಕ ಭುವನ್ ಅವರ ಬೇಜವಾಬ್ದಾರಿ ತನವೇ ಕಾರಣ. ಅಲ್ಲದೆ, ಈ ಭಾಗದಲ್ಲಿ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ, ಹೀಗಾಗಿ ರಸ್ತೆಯನ್ನು ಮತ್ತಷ್ಟು ಅಗಲೀಕರಣ ಮಾಡಬೇಕು ಎಂಬ ಕೂಗೂ ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸರ್ಕಾರದ ಪರವಾಗಿ ನಾನು ಹಾಗೂ ಹಾಸನ ಜಿಲ್ಲೆ ಸಂಸದ ಶ್ರೇಯಸ್ ಎಂ ಪಾಟೀಲ್ ಸಹ ಪತ್ರ ಬರೆಯಲಿದ್ದಾರೆ. ಅಲ್ಲದೆ, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕಿದೆ. ಈ ಬಗ್ಗೆಯೂ ಪತ್ರದಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ದುರಂತದಲ್ಲಿ ಮೃತಪಟ್ಟವರಿಗೆ ತಲಾ ಐದು ಲಕ್ಷ ರೂಪಾಯಿಗಳನ್ನು ರಾಜ್ಯ ಸರ್ಕಾರದ ವತಿಯಿಂದ ಪರಿಹಾರವಾಗಿ ಘೋಷಣೆ ಮಾಡಲಾಗಿದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ದುರ್ಘಟನೆಗೆ ಕಾರಣನಾದ ಟ್ರಕ್‌ ಚಾಲಕ ಭುವನ್‌ ವಿರುದ್ಧ ಗೋರೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Call Now Button