ಕಲಬುರಗಿ: ರಾಜ್ಯಾದ್ಯಂತ ಈ ಬಾರಿ ವಾಡಿಕೆಗಿಂತ ಶೇ.17ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿಯಾಗಿದ್ದು, ತಕ್ಷಣವೇ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು ಅತಿವೃಷ್ಟಿ ಪೀಡಿತ ಪ್ರದೇಶಗಳ ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ, ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಳೆ ಹಾನಿಗೆ ಸಮರ್ಪಕವಾಗಿ ಪರಿಹಾರ ತಲುಪಿಸಬೇಕು. ಮಾನವ- ಜಾನುವಾರು ಜೀವ ಹಾನಿಗಳಿಗೆ ಶೇ.100 ರಷ್ಟು ಪರಿಹಾರ ಒದಗಿಸಿರುವ ರೀತಿಯಲ್ಲೇ ಬೆಳೆ ಹಾನಿಗೂ ಒದಗಿಸಬೇಕು.
ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆ ಆಗಿದೆ. ವಾಡಿಕೆಗಿಂತ ಶೇ17 ರಷ್ಟು ಮಳೆ ಹೆಚ್ಚಾಗಿದೆ. 37 ಜನರ ಜೀವ ಹಾನಿ ಪ್ರಕರಣಗಳು ವರದಿಯಾಗಿದ್ದು, ಎಲ್ಲಾ ಪರಿಹಾರ ನೀಡಲಾಗಿದೆ.
175 ಜಾನುವಾರುಗಳ ಪ್ರಾಣ ಹಾನಿ ಪ್ರಕರಣಗಳು ವರದಿಯಾಗಿದ್ದು, ಎಲ್ಲದಕ್ಕೂ ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಆಗಿರುವ ಎಲ್ಲಾ ಪ್ರಕರಣಗಳಲ್ಲೂ ಪರಿಹಾರ ನೀಡಲಾಗಿದೆ.
ಬೀದರ್, ಕಲಬುರಗಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಿಂದ ಹೆಚ್ಚು ಹಾನಿ ಸಂಭವಿಸಿದೆ. ನಿರಂತರ ಜೋಳು ಮಳೆ ಇರುವುದರಿಂದ ಬೆಳೆ ಹಾನಿಯ ಸಂಪೂರ್ಣ ಜಂಟಿ ಸಮೀಕ್ಷೆಗೆ ಅಡ್ಡಿ ಆಗುತ್ತಿದೆ. ಹೀಗಾಗಿ ನಿಗಧಿತ ಅವಧಿಯೊಳಗೆ ಜಂಟಿ ಸಮೀಕ್ಷೆ ಪೂರ್ಣಗೊಂಡಿಲ್ಲ. ಆದಷ್ಟು ಶೀಘ್ರ ಸಮೀಕ್ಷೆ ಮುಗಿಸಿ, ಪರಿಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ ಬೆಳೆಹಾನಿ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ರೈತರ ಅಹವಾಲುಗಳನ್ನು ಸ್ವೀಕಾರ ಮಾಡಿದರು.


