ನವದೆಹಲಿ: ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ವಜಾಗೊಂಡಿದೆ. ಆ ಮೂಲಕ ದಸರಾ ಉದ್ಘಾಟನೆ ಸಂಬಂಧ ನಡೆದಿದ್ದ ಕಾನೂನು ಹೋರಾಟಗಳಿಗೆ ತೆರೆ ಬಿದ್ದಂತಾಗಿದೆ.
ಬಾನು ಮುಷ್ತಾಕ್ ಅವರಿಂದ ಹಿಂದೂಗಳ ಧಾರ್ಮಿಕ ಹಬ್ಬವಾದ ದಸರಾ ಉದ್ಘಾಟನೆ ಮಾಡಿಸಬಾರದು. ಇದು ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತದೆ ಎಂದು ಹೇಳಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಮೂವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಬಾನು ಮುಷ್ತಾಕ್ ಅವರ ಆಯ್ಕೆಯಿಂದ ಯಾವುದೇ ರೀತಿಯ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ. ಸರ್ಕಾರ ನಡೆಸುವ ಕಾರ್ಯಕ್ರಮವನ್ನು ಅನ್ಯ ಧರ್ಮದವರು ಉದ್ಘಾಟನೆ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿಲ್ಲ ಎಂದು ತೀರ್ಪು ನೀಡಿ ಅರ್ಜಿ ವಜಾ ಮಾಡಿತ್ತು.
ಇದರ ಮುಂದುವರಿದ ಭಾಗವಾಗಿ ಎಚ್.ಎಸ್. ಗೌರವ್ ಎನ್ನುವವರು ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿದ್ದ ಏಕಸದಸ್ಯ ಪೀಠವು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಆ ಮೂಲಕ ದಸರಾ ಉದ್ಘಾಟನೆ ಸಂಬಂಧ ಆರಂಭವಾಗಿದ್ದ ಕಾನೂನು ಹೋರಾಟಗಳಿಗೆ ತೆರೆ ಬಿದ್ದಂತೆ ಆಗಿದೆ.


