Online News in ಕನ್ನಡ

ದಸರಾಗೆ ಬಿಗಿ ಬಂದೋಬಸ್ತ್‌, ಸಿಸಿ ಟಿವಿ ಕಣ್ಗಾವಲು; ಕಮೀಷನರ್‌ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಬಂದೋಬಸ್ತ್‌ ಗೆ ಈ ಬಾರಿ 75000 ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತರಾದ ಸೀಮಾ ಲಾಟ್ಕರ್‌ ಮಾಹಿತಿ ನೀಡಿದ್ದಾರೆ.

ದಸರಾ ಆಚರಣೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಬಾರಿ ಹನ್ನೊಂದು ದಿನಗಳ ಕಾಲ ದಸರಾ ನಡೆಯಲಿದ್ದು, 75000 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಜಂಬೂ ಸವಾರಿ ವೇಳೆಯಲ್ಲಿ ಸುಮಾರು ಹದಿನೈದು ಲಕ್ಷ ಮಂದಿ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅರಮನೆಯಲ್ಲಿ 48 ಸಾವಿರ ಮತ್ತು ಬನ್ನಿಮಂಟಪದಲ್ಲಿ 32 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಪಾಸ್‌ ಇದ್ದವರಿಗೆ ಮಾತ್ರವೇ ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ನಗರದಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ತಿಳಿಸಿದರು.

ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ

ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು 30,614 ಸಿಸಿ ಕ್ಯಾಮರಾಗಳ ಕಣ್ಗಾವಲು ಇರಲಿದೆ. ಪ್ರವಾಸಿಗರ ಅನುಕೂಲಕ್ಕಾಗಿ 43 ಕಡೆ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಮಾರ್ಗಗಳ ಬದಲಾವಣೆ ಮಾಡುವುದು ಅರಮನೆ ಸುತ್ತ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗುತ್ತಿದ್ದು ಉತ್ತನಹಳ್ಳಿ ಬಳಿ ಯುವ ದಸರಾಗೆ ತಯಾರಿ ನಡೆಯುತ್ತಿದೆ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.

ದಸರಾ ವೇಳೆ ತುತ್ತೂರಿ ನಿಷೇಧ

ಇನ್ನು ಮೈಸೂರು ನಗರ ಘಟಕ ವ್ಯಾಪ್ತಿಯಲ್ಲಿ ಕಳೆದ ವರ್ಷಗಳ ದಸರಾ ಹಬ್ಬದ ಸಮಯದಲ್ಲಿ ಸಾರ್ವಜನಿಕ ರಸ್ತೆ ಸ್ಥಳಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ  ಕೆಲ ಪುಂಡ ಪೋಕರಿಗಳು ತುತ್ತೂರಿ ಊದಿ ಕಿರಿಕಿರಿ ಉಂಟು ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮೈಸೂರು ನಗರ ಪೊಲೀಸ್ ಕಮಿಷನರೇಟ್ ಘಟಕದ ವ್ಯಾಪ್ತಿಯಲ್ಲಿ ತುತ್ತೂರಿ ಮಾರಾಟ ಮಾಡುವುದನ್ನ ಮತ್ತು ಬಳಸುವುದನ್ನ ನಿಷೇಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಸುಂದರ್ ರಾಜ್, ಬಿಂದು ಮಣಿ ಭಾಗಿಯಾಗಿದ್ದರು.

 

Call Now Button