Online News in ಕನ್ನಡ

ಕಾವ್ಯ ಎಲ್ಲರನ್ನೂ ಬೆಸೆಯುವ ಜೀವತಂತು; ಕವಯತ್ರಿ ಗೀತಾ ವಸಂತ

ಮೈಸೂರು: ಕಾವ್ಯ ಬರೀ ರಚನೆಯಲ್ಲ, ಶೋಧನೆಯಾಗಿರಬೇಕು. ಕಾವ್ಯವು ಜಾತಿ, ಧರ್ಮ, ಲಿಂಗ ಭೇದಗಳ ಆಚೆಗೆ ಎಲ್ಲರನ್ನು ಒಗ್ಗೂಡಿಸಿ ಬೆಸೆಯುವ ಕೆಲಸವನ್ನು ಮಾಡುತ್ತದೆ ಎಂದು ಕವಯಿತ್ರಿ ಪ್ರೊ.ಗೀತಾ ವಸಂತ ಅವರು ಹೇಳಿದರು.

ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಇಂದಿನಿಂದ 5 ದಿನಗಳ ಕಾಲ ಆಯೋಜಿಸಿರುವ ಪಂಚಕಾವ್ಯದೌತಣ ಪ್ರಭಾತ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಣ್ಣಕಾವ್ಯ, ಮಹಾಕಾವ್ಯ ಹಾಗೂ ಪ್ರಚೀನ ಕಾವ್ಯಗಳು ಜನರ ಆಶೋತ್ತರಗಳನ್ನು ಅಭಿವ್ಯಕ್ತಗೊಳಿಸುತ್ತದೆ. ಭಾವಕೋಶ, ಅನುಭವ ಕೋಶದಿಂದ ತಾತ್ವಿಕವಾಗಿ ಕಟ್ಟುವುದೇ ಕಾವ್ಯ ಎಂದ ಅವರು ಕುವೆಂಪು ರವರು ಹೇಳಿದಂತೆ ಕವಿಗಳು ವಿಶ್ವಮಾನವ ಪ್ರಜ್ಞೆಯನ್ನು‌ಹೊಂದಬೇಕು ಎಂದು ತಿಳಿಸಿದರು.

ಗೀತ ರಚನಾಕಾರ ಕವಿರಾಜ್ ಮಾತನಾಡಿ, ನಿಸರ್ಗವು ಕೆಲವು ವ್ಯಕ್ತಿಗಳಿಗೆ ಮಾತ್ರ ಬರೆವಣಿಗೆಯ ಸೃಜನಶೀಲತೆಯನ್ನು ನೀಡುತ್ತದೆ. ಕವಿತೆಯು ಸಮಾಜದಲ್ಲಿ ಸಣ್ಣ ಬದಲಾವಣೆಗೆ ಬೀಜ ಬಿತ್ತುತ್ತವೆ. ನಾವು ರಚಿಸಿರುವ 4 ಸಾಲುಗಳು ಯಾವೋದೋ ಒಂದು ಜೀವಕ್ಕೆ ಉಪಯೋಗವಾದರೆ ಸಾಕು. ಟ್ರೊಲ್ ಯುಗದಲ್ಲಿ ಸಮಚಿತ್ತವಾಗಿ ಮಾತನಾಡುವವರನ್ನು ಸಮಾಜ ಗಮನಿಸುವುದಿಲ್ಲ‌. ಹಾಗಾಗಿ ರಮ್ಯತೆಯಿಂದ ಆಚೆಗೆ ಬಂದು ಸಮಾಜದ ತಲ್ಲಣಗಳಿಗೆ ಈಗಿನ ಕವಿಗಳು ಧನಿಯಾಗುವಂತೆ ಸಲಹೆ ನೀಡಿದರು.

ಪ್ರಾದೇಶಿಕ ಕವಿಗಳಿಂದ ಕವನ ವಾಚನ
ಪಂಚಕಾವ್ಯದೌತಣದ ಮೊದಲ ದಿನವಾದ ಇಂದು ಪ್ರಭಾತ ಕವಿಗೋಷ್ಠಿಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ಆಗಮಿಸಿದ ಪ್ರಾದೇಶಿಕ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿ ನೆರೆದ ಕನ್ನಡಾಭಿಮಾನಿಗಳಿಂದ ಸೈ ಎನಿಸಿಕೊಂಡರು.

ಪ್ರಾಧ್ಯಾಪಕರು, ಅಂಚೆ ಇಲಾಖೆ, ಅರಣ್ಯ , ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು, ರೈತರು, ಶಾಲಾ ಮಕ್ಕಳು ಕವನ ವಾಚಿಸಿ ಕನ್ನಡಾಭಿಮಾನ ಮೆರೆದಿದ್ದಾರೆ.

ಅಭಿಜ್ಞಾ ಪಿ.ಎಂ.ಗೌಡ ರವರು “ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ” ಕೊಡಗು ಜಿಲ್ಲೆಯ ಅಯ್ಯಪ್ಪ ಎಂ. ರವರು “ಗಜವೀರ ಅಭಿಮನ್ಯು” ಕುರಿತು ಕವಿತೆ ವಾಚಿಸಿದರೆ, ಚಾಮರಾಜನಗರದ ಕೊಳ್ಳೆಗಾಲದವರಾದ ಖಾತ್ಯಾಯಿಣಿ ಪಿ. ರವರು ಅಕ್ಕ ತನ್ನ ತಂಗಿಗೆ ಧೈರ್ಯ ತುಂಬುವ ಕವಿತೆ “ಭದ್ರೆ ಜೀವ ಭದ್ರ” ಯನ್ನು ವಾಚಿಸಿದರು.

ಮಂಡ್ಯ ಜಿಲ್ಲೆಯ ರೈತಕವಿ ಕ್ರಾಂತಿವೀರ ಸಿಂಹ ರವರು “ಜೀತ” ಕುರಿತ ಕವಿತೆ ವಾಚಿಸಿದರೆ, ಹಾಸನ ಜಿಲ್ಲೆಯ ನಿವೃತ್ತ ಅಂಚೆ ಮಾಸ್ತರಾದ ಕವಿ ಕುಮಾರ ಛಲವಾದಿ ಅವರು ವೃದ್ಧಾಶ್ರಮದಲ್ಲಿ ಹಿರಿಯ ಜೀವಗಳ ತಳಮಳ ಕುರಿತ “ವೃದ್ಧಾಶ್ರಮದ ಗೊಡೆಗಳಿಗೆ ಕಿವಿಗಳಿರಬೇಕಿತ್ತು” ಎಂಬ ಕವಿತೆ ವಾಚಿಸಿ ಎಲ್ಲರ ಗಮನ ಸೆಳೆದರು.

ನಂಜನಗೂಡಿನ ಯುವ ಕವಿ “ಕೊಲ್ಲುವುದಾದರೆ” ಜಾತಿ, ಧರ್ಮ, ಬಡತನ, ಬ್ರಷ್ಟಾಚಾರವನ್ನು ಕೊಲ್ಲಲಿ ಎಂಬ ಕವತಿ ವಾಚಿಸಿದರೆ. ಕೊಡಗಿನ ಜಲಜ ಶೇಖರ್ ಅವರು ಕಾರ್ಶೀರದಲ್ಲಿ ಉಗ್ರರ ನರಮೇದವನ್ನು ಕವಿತೆ ಮೂಲಕ ಭಾರತೀಯರ ನರಳಾಟವನ್ನು ಚಿತ್ರಿಸಿದರು.

ಗಮನ ಸೆಳೆದ ಬಾಲ‌ ಕವಿಗಳ ಕವನ
ಹೆಚ್.ಡಿ.ಕೋಟೆಯ ಹೆಬ್ಬಲುಗುಪ್ಪೆಯ ಸುಮಾರು 11 ವರ್ಷದ ಧಾನ್ಯ‌ ಜಿ. ಅರಸ್ ನಾಡು, ನುಡಿ, ಕನ್ನಡ ಕವಿಗಳ ಕುರಿತ “ನಮ್ಮ ನಾಡು” ಎಂಬ ಕವನ ವಾಚಿಸಿ ಗಮನ ಸೆಳೆದರೆ. 14 ವರ್ಷದ ನಿಶಾಂತ ಎಂ.ಕೆ ರವರು ಸಾಮಾಜಿತ ಜಾಲತಾಣಕ್ಕೆ ಅಂಟಿಕೊಂಡಿರುವ ಆಧುನಿಕ ಮಕ್ಕಳ ಜೀವನ ಶೈಲಿ, ಮೊಬೈಲ್ ಸ್ಕ್ರಾಲ್ ಮಾಡುತ್ತಾ ಬಾಲ್ಯ ಕಳೆಯುವ ಮಕ್ಕಳ ಕುರಿತು ” ಜೆನ್ಸಿ ಮಕ್ಕಳು” ಎಂಬ ಕವನವಾಚಿಸಿ ಎಲ್ಲರ ಚಪ್ಪಾಳೆಗೆ ಗಿಟ್ಟಿಸಿಕೊಂಡಳು.

 

Call Now Button