ಮೈಸೂರು: ನಿನ್ನೆ ನಡೆದ ಅದ್ಧೂರಿ ದಸರಾ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ, ಸಚಿವರ ಪೆರೇಡ್ ನಲ್ಲಿ ಬಾಲಕನೊಬ್ಬ ಕಾಣಿಸಿಕೊಂಡಿದ್ದು, ಇದು ತೀರ್ವ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಹುಡುಗ ಹೇಗೆ ಬಂದ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಮಾಹಿತಿ ನೀಡುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ದಸರಾ ಕಾರ್ಯಕ್ರಮದ ತೆರದ ವಾಹನ ಸಂಚಾರದಲ್ಲಿ ಸಿಎಂ, ಡಿಸಿಎಂ ಜೊತೆಗೆ ಸಚಿವರಾದ ಎಚ್ ಸಿ ಮಹದೇವಪ್ಪ, ಶಿವರಾಜ ತಂಗಡಗಿ, ಶಾಸಕ ತನ್ವೀರ್ ಸೇಠ್ ಇದ್ದರು. ಇವರೊಂದಿಗೆ ಬಾಲಕನೊಬ್ಬ ಕಾಣಿಸಿಕೊಂಡಿದ್ದ. ಇವನನ್ನು ಸಚಿವ ಎಚ್.ಸಿ.ಮಹದೇವಪ್ಪ ಮೊಮ್ಮಗ ಎನ್ನಲಾಗುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ಕಡೆ ಸಾವಿರಾರು ರೂಪಾಯಿ ನೀಡಿ ದಸರಾ ಪಾಸ್ ಕೊಂಡುಕೊಂಡಿದ್ದರೂ ಅವರಿಗೆ ಉತ್ತಮ ರೀತಿಯಲ್ಲಿ ದಸರಾ ನೋಡಲು ಅವಕಾಶ ಸಿಕ್ಕಿಲ್ಲ. ಪಾಸ್ ತೋರಿಸಿದರೂ ಅರಮನೆ ಒಳಗೆ ಬಿಟ್ಟಿಲ್ಲ ಎನ್ನುವ ಗಂಭೀರ ಆರೋಪ ಮತ್ತು ಅಸಮಾಧಾನ ಕೇಳಿ ಬರುತ್ತಿದೆ. ಇದರ ನಡುವಲ್ಲೇ ರಾಜಕಾರಣಿಗಳು, ಅಧಿಕಾರಿ ವರ್ಗ ತಮ್ಮ ಕುಟುಂಬಸ್ಥರು, ತಮಗೆ ಬೇಕಾದವರಿಗೆ ಎಲ್ಲಾ ರೀತಿಯಲ್ಲೂ ದಸರಾ ಸವಿಯಲು ಅನುವು ಮಾಡಿಕೊಟ್ಟಿದ್ದಾರೆ. ಇದು ಜನ ಸಾಮಾನ್ಯರ ದಸರಾ ಆಗದೇ ರಾಜಕಾರಣಿಗಳು, ಅಧಿಕಾರಿಗಳ ದಸರಾ ಆಗಿದೆ ಎನ್ನುವ ಅಸಮಾಧಾನದ ಕಿಡಿಯೂ ಹೊತ್ತಿದೆ.
ಇದರ ನಡುವಲ್ಲೇ ಕಾಂಗ್ರೆಸ್ ಹೈ ಕಮಾಂಡ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಂವಿಧಾನಿ ಹುದ್ದೆಯಲ್ಲಿ ಇಲ್ಲದ ವ್ಯಕ್ತಿಯನ್ನು ಪೆರೇಡ್ ನಲ್ಲಿ ಭಾಗಿಯಾಗುವಂತೆ ಮಾಡಿದ್ದು ಯಾರು..? ಯಾಕೆ..? ಎನ್ನುವ ಪ್ರಶ್ನೆ ಮಾಡಿದೆ. ಜೊತೆಗೆ ಇದರ ಬಗ್ಗೆ ಸೂಕ್ತ ಮಾಹಿತಿ ನೀಡಿ ಎನ್ನುವ ಸೂಚನೆ ನೀಡಿದೆ ಎನ್ನಲಾಗುತ್ತಿದೆ.


