Online News in ಕನ್ನಡ

ಹುಲಿ ಹತ್ಯೆ; ನಾಲ್ವರಿಗೆ ನ್ಯಾಯಾಂಗ ಬಂಧನ, ಮತ್ತೊಬ್ಬನಿಗೆ ಶೋಧ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹಸುವನ್ನು ಕೊಂದು ತಿಂದಿದೆ ಎನ್ನುವ ಕಾರಣಕ್ಕಾಗಿ ಆರೋಪಿಗಳು ಮೃತ ಹಸುವಿನ ದೇಹಕ್ಕೆ ವಿಷ ಬೆರೆಸಿ ಹುಲಿಯ ಹತ್ಯೆ ಮಾಡಿದ್ದರು ಎನ್ನಲಾಗಿದೆ. ಜೊತೆಗೆ ಮೃತ ಹುಲಿಯನ್ನು ಮೂರು ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದು, ನಾಲ್ಕು ದಿನಗಳ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯ ಕಳೆಬರವನ್ನು ಪತ್ತೆ ಹಚ್ಚಿದ್ದರು.

ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳ ಹತ್ಯೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಈ ಸಂಬಂಧ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ವೇಳೆಯಲ್ಲೇ ಮತ್ತೊಂದು ಅದೇ ಬಗೆಯ ಪ್ರಕರಣ ಬೆಳಕಿಗೆ ಬದಿದೆ. ಇದೀಗ ಹತ್ಯಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪಚ್ಚಮಲ್ಲ ಅಲಿಯಾಸ್ ಸಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹನೂರು ತಾಲೂಕು ಪಚ್ಚದೊಡ್ಡಿ ಗ್ರಾಮದ ನಿವಾಸಿ. ಪಚ್ಚಮಲ್ಲನ ನಾಲ್ವರು ಸಹಚರರಾದ ಗಣೇಶ, ಗೋವಿಂದೇಗೌಡ ಹಾಗೂ ಮಂದೆ ಕುರಿ ಮೇಯಿಸುತ್ತಿದ್ದ ಮಂಜುನಾಥ, ಕಂಬಣ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ.

ಹುಲಿಯನ್ನು ಸೇಡು ತೀರಿಸಿಕೊಳ್ಳಲು ಕೊಲ್ಲಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಮೃತ ಹುಲಿಯ ಇನ್ನುಳಿದ ಕಳೆಬರವನ್ನ ಅರಣ್ಯ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಹುಲಿಯ ತಲೆ ಹಾಗು ಮುಂಗಾಲುಗಳನ್ನು ಮಣ್ಣಿನಲ್ಲಿ ಹೂಳಲಾಗಿತ್ತು. ಹುಲಿಯ ಮಧ್ಯ ಭಾಗದ ದೇಹವನ್ನು ಎಲೆಗಳಲ್ಲಿ ಮುಚ್ಚಿಡಲಾಗಿತ್ತು. ಹುಲಿಯ ಹಿಂಭಾಗದ ದೇಹವನ್ನು ಮರದ ಕೆಳಗೆ ಎಸೆಯಲಾಗಿತ್ತು.

ಪಚ್ಚಮಲ್ಲನ ಹಸುವನ್ನು ಹುಲಿ ಬೇಟೆಯಾಡಿ ಕೊಂದು ಭಕ್ಷಣೆ ಮಾಡಿದ್ದು, ತಾನು ಸಾಕಿದ ಹಸುವನ್ನು ಕೊಂದಿದ್ದಕ್ಕೆ ಪಚ್ಚಮಲ್ಲ ರೊಚ್ಚಿಗೆದ್ದಿದ್ದ. ಹುಲಿಗೆ ಒಂದು ಗತಿ ಕಾಣಿಸಲೇಬೇಕೆಂದು ಸ್ಕೆಚ್ ಹಾಕಿದ್ದ. ಗೋವಿಂದೇಗೌಡ, ಮಂಜುನಾಥ, ಕಂಬಣ್ಣ, ಗಣೇಶನ ಜೊತೆ ಸೇರಿ ಸಂಚು ರೂಪಿಸಿದ್ದ. ಹುಲಿಗೆ ಮಾಂಸದಲ್ಲಿ ವಿಷ ಹಾಕಿ ಕೊಂದು ಹಾಕಿದ್ದರು. ಹುಲಿಗೆ ವಿಷ ಹಾಕಿ ಸತ್ತ ಬಳಿಕ ಕೊಡಲಿಯಿಂದ ಕತ್ತರಿಸಿ ಮೂರು ಭಾಗ ಮಾಡಿದ್ದರು.

Call Now Button