ದೆಹಲಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆ ಇಂದು ನಡೆದಿದ್ದು, ಶೂ ಎಸೆದ ವಕೀಲನನ್ನ ಪೊಲೀಸರು ಬಂಧಿಸಿದ್ದಾರೆ.
ಇಂದು ವಿಚಾರಣೆ ವೇಳೆ ವಕೀಲ ರಾಜಶೇಖರ್ ಕಿಶೋರ್ ಎಂಬುವವರು ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದಾರೆ. ತಕ್ಷಣ ಪೊಲೀಸರುಮ ವಕೀಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ ಎಂದು ವಕೀಲ ಚಿರಾಡಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಇಂಥಾ ಘಟನೆಗಳಿಂದ ನಾವು ವಿಚಲಿತರಾಗಲ್ಲ ಎಂದಿದ್ದಾರೆ.
ಘಟನೆ ಹಿನ್ನೆಲೆ:
ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಯ ಖಜುರಾಹೊ ದೇವಾಲಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ದೇವಸ್ಥಾನದ ಸಂಕೀರ್ಣದ ಭಾಗವಾಗಿರುವ ಜವರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ಮತ್ತು ಮರುಸ್ಥಾಪಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ವಾದ-ಪ್ರತಿವಾದ ನಡೆಯುತ್ತಿತ್ತು. ಇದಕ್ಕೂ ಮುನ್ನಸುಪ್ರೀಂ ಕೋರ್ಟ್ ವಜಾಗೊಳಿಸಿದ ಸೆಪ್ಟೆಂಬರ್ 16 ರ ಪ್ರಕರಣದಲ್ಲಿ ಸಿಜೆಐ ಗವಾಯಿ ಅವರ ಹೇಳಿಕೆಗಳಿಂದ ಈ ಘಟನೆ ನಡೆದಿರಬಹುದು ಎನ್ನಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗವಾಯಿ ಅವರು, ಇದೆಲ್ಲದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಇನ್ನು ಆರೋಪಿ ವಕೀಲ ನ್ಯಾಯಪೀಠದ ಬಳಿ ಹೋಗಿ ತಮ್ಮ ಶೂ ತೆಗೆದು ನ್ಯಾಯಾಧೀಶರ ಮೇಲೆ ಎಸೆಯಲು ಪ್ರಯತ್ನಿಸಿದ್ದು, ಕೂಡಲೇ ಅವರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ಯಲಾಗಿದೆ. ಈ ವೇಳೆ ಅವರು ಸನಾತನ ಅವಮಾನವನ್ನು ಸಹಿಸುವುದಿಲ್ಲ ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.


