ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಬಿರುಸಾಗಿ ಸಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಗಣತಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಶೇ. 90ರಷ್ಟು ಜನ ಸಹಕಾರ ನೀಡುತ್ತಿದ್ದಾರೆ. ನಗರ ಪ್ರದೇಶದಲ್ಲಿಯೂ ಜನತೆ ಸಹಕಾರ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಣತಿಗೆ ಇನ್ನೂ ಹತ್ತು ದಿನಗಳ ವರೆಗೆ ದಿನಾಂಕ ವಿಸ್ತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿ ಮೇರೆಗೆ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಸಮೀಕ್ಷೆಯನ್ನು ಪೂರ್ಣಗೊಳಿಸಲು ಅದರ ಅವಧಿಯನ್ನು ಇನ್ನೂ ಹತ್ತು ದಿನಗಳವರೆಗೆ ವಿಸ್ತರಿಸಲಾಗಿದೆ. ಅಕ್ಟೋಬರ್ 18ರವರೆಗೆ ಎಲ್ಲ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ. 90ರಷ್ಟು ಜನ ಸಮೀಕ್ಷೆಗೆ ಸಹಕಾರ ನೀಡುತ್ತಿದ್ದಾರೆ. ಗಣತಿದಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ಸರ್ಕಾರದ ಪರವಾಗಿ ಅವರೆಲ್ಲರಿಗೂ ಹಾಗೂ ಮಾಹಿತಿ ನೀಡಿದ ನಾಗರಿಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ, ಚುನಾವಣಾ ಆಯೋಗದ ಕೆಲವೊಂದು ಕೆಲಸಗಳಿಂದಾಗಿ ಸಮೀಕ್ಷೆ ನಿಧಾನವಾಗಿ ಪ್ರಾರಂಭವಾಗಿದೆ. ನಮ್ಮ ಸರ್ಕಾರದ ಪರವಾಗಿ ಮನವಿ ಮಾಡುವುದೇನೆಂದರೆ, ರಾಜ್ಯದ ಹಿತಕ್ಕಾಗಿ ಮತ್ತು ಎಲ್ಲರಿಗೂ ನ್ಯಾಯ ಒದಗಿಸಲು ಈ ಸಮೀಕ್ಷೆ ಅತ್ಯಗತ್ಯ. ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಬಂದು ನೆಲಸಿರುವವರ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಯನ್ನು ತಿಳಿಯಲು ಇದು ಮುಖ್ಯ. ಆದ್ದರಿಂದ, ಬೆಂಗಳೂರಿನ ನಿವಾಸಿಗಳು ಗಣತಿದಾರರಿಗೆ ಸಹಕಾರ ನೀಡಬೇಕು ಅಥವಾ ಆನ್‌ಲೈನ್‌ನಲ್ಲಿ ಸಹ ಮಾಹಿತಿ ನೀಡಬಹುದು. ಎಲ್ಲಾ ಮಾಹಿತಿ ನೀಡಲೇಬೇಕೆಂಬ ಒತ್ತಡ ಇಲ್ಲ, ನಿಮಗೆ ಎಷ್ಟು ಮಾಹಿತಿ ನೀಡಬೇಕೆಂದು ಅನಿಸುತ್ತದೆಯೋ ಅಷ್ಟನ್ನೇ ನೀಡಿ ಸಹಕರಿಸಬೇಕೆಂದು ವಿನಂತಿ ಮಾಡಿದರು.


