ಮೈಸೂರು: ನಾಯಕತ್ವ ಬದಲಾವಣೆ ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಳಗಿರುವ ಎರಡು ವ್ಯಕ್ತಿತ್ವದ ನಡುವಿನ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳುವ ಸ್ಥಿತಿ ಬರಬಾರದಿತ್ತು. ಇದು ರೆಬಲ್ (ಬಂಡಾಯ) ಸಿದ್ದರಾಮಯ್ಯ ಮತ್ತು ರಾಜಿ (ಕಾಂಪ್ರಮೈಸ್) ಸಿದ್ದರಾಮಯ್ಯ ನಡುವೆ ಹೋರಾಟ ಶುರುವಾಗಿದೆ ಎಂದರು.
ಮೊದಲಿನಂತೆ ರೆಬಲ್ ಸಿದ್ದರಾಮಯ್ಯ ಆದ್ರೆ ಯಾವುದೇ ಕಾರಣಕ್ಕೂ ಅವರು ಅಧಿಕಾರ ಬಿಟ್ಟು ಕೊಡುವುದಿಲ್ಲ. ರಾಜೀ ಮನೋಭಾವದ ಸಿದ್ದರಾಮಯ್ಯ ಅದ್ರೆ ಅಧಿಕಾರ ಬಿಟ್ಟುಕೊಡುತ್ತಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ತಮ್ಮ ಗಟ್ಟಿತನ ಉಳಿಸಿಕೊಳ್ಳಲಿದ್ದಾರೆ ಎಂಬುವುದು ಕುತೂಹಲವಿದೆ ಎಂದು ನುಡಿದರು.
ನಾನು ಮೊದಲಿನಿಂದಲೂ ನೋಡಿದ ಸಿದ್ದರಾಮಯ್ಯ ರೆಬೆಲ್. ಅವರದ್ದು ಯಾವಾಗಲೂ ಗಟ್ಟಿ, ಗಡಸುತನದ ರಾಜಕಾರಣ. ಅಂತವರು ಪ್ರತಿದಿನ ನಾನೇ ಸಿಎಂ ಎಂದು ಹೇಳುವ ಪರಿಸ್ಥಿತಿ ಬರಬಾರದಿತ್ತು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ದಿನವೇ ಕಾಂಗ್ರೆಸ್ ಮನೆಯಲ್ಲಿ ಬಿರುಕು ಶುರುವಾಗಿತ್ತು ಎಂದು ಆರೋಪಿಸಿದರು.


