Online News in ಕನ್ನಡ

ಸಂವಿಧಾನ ದಿನದ ಮುನ್ನಾ ದಿನ ರಾಮ ರಾಜ್ಯದ ಘೋಷಣೆ ಸರಿಯೆ ?

ಕಾಲಮಾನ-7
ಕೆ.ದೀಪಕ್,
ಪ್ರಧಾನ ಸಂಪಾದಕ, ವಿಜಯಕಾಲ

ವೆಂಬರ್ 26 ಭಾರತದ ಭವಿಷ್ಯವನ್ನು ಬದಲಿಸಿದ ದಿನ. ಸಂವಿಧಾನ ಶಿಲ್ಪ ಡಾ. ಬಿ.ಆರ್. ಅಂಬೇಡ್ಕರ್ ಬರೆದ `ಭಾರತದ ಸಂವಿಧಾನ’ವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡ ದಿನ. ಹಾಗಾಗಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಇಂದು ಸಂವಿಧಾನದ ಗುಣಗಾನ ಮಾಡಬೇಕು. ಆದರೆ, ಸಂವಿಧಾನ ನೀಡಿದ ಹಕ್ಕುಗಳಿಂದಾಗಿ ದೇಶವನ್ನಾಳುವ ಅವಕಾಶ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಶಾಸನವಾಗಿಸಿಕೊಂಡ ಮುನ್ನಾ ದಿನ (ನವೆಂಬರ್ 25) ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಹಾರಿಸಿ ರಾವ ುರಾಜ್ಯ ಮರು ಸ್ಥಾಪನೆ ಘೋಷಣೆ ಮಾಡಿರುವುದು ಚರ್ಚೆಯನ್ನು ಹುಟ್ಟು ಹಾಕಿದೆ.
ಇನ್ನು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ` ಈ ಧರ್ಮ ಧ್ವಜವು ಕೇವಲ ಧ್ವಜವಲ್ಲ. ಇದು ಭಾರತೀಯ ನಾಗರಿಕತೆಯ ಪುನರ್ ಜಾಗೃತಿಯ ಧ್ವಜವಾಗಿದೆ. 500 ವರ್ಷಗಳ ಹಳೆಯ ಸಂಕಲ್ಪ ನೆರವೇರಿದೆ’ ಎಂದಿದ್ದಾರೆ. ಅಂದರೆ ಭಾರತದ ನಿಜ ನಾಗರೀಕತೆ ಯಾವುದು ? ಈ ನಾಗರೀಕತೆಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ದೊರಕಿದ ಸ್ಥಾನಮಾನಗಳು ಏನು ? ದೊರಕಿದ ಅವಕಾಶಗಳೆಷ್ಟು ? ಸಂದ ಗೌರವ ಮನ್ನಣೆಗಳು ಏನು ? ಮಹಿಳೆಯರ ಸ್ಥಿತಿ ಹೇಗಿತ್ತು ? ಈ ದೇಶದ ಮೂಲ ನಿವಾಸಿಗಳ ಅಸ್ಥಿತ್ವ ಯಾವುದು ? ಶೋಷಿತ ಸಮುದಾಯಗಳ ಅಸ್ಮಿತೆ ಏನಾಗಿತ್ತು ? ಜಾತಿಯ ಕರಾಳ ಆಚರಣೆಗಳು ಹೇಗಿದ್ದವು ? ಇದಕ್ಕೆಲ್ಲ ಪ್ರಧಾನಿ ಮೋದಿ ಅವರು ಸಂವಿಧಾನ ದಿನದಂದು ಉತ್ತರಿಸಬೇಕಿದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆಗೆ ಸ್ವಾತಂತ್ರ್ಯ ಬಂದು ಭಾರತ ದೇಶ 100 ವರ್ಷ ಪೂರೈಸಲಿದ್ದು ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಘೋಷಿಸಿದ್ದಾರೆ. ನಿಜ ಇದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ. ಆದರೆ, ದೇಶವೆಂದರೆ ಏನು ? ತೆಲುಗಿನ ಮಹಾಕವಿ ವೆಂಕಟ ಅಪ್ಪಾರಾವ್ ಗುರುಜಾಡ ಅವರು ಒಂದು ಶತಮಾನದ ಹಿಂದೆ ಹೇಳಿದ ಮಾತು ` ದೇಶಮಂಟೆ ಮಟ್ಟಿ ಕಾದು, ದೇಶಮಂಟೆ ಮನುಷಲು’ (ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಮನುಷ್ಯರು. ಇನ್ನೂ ಮುಂದುವರೆದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮೊದಲ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಹೀಗೆ ಹೇಳಿದ್ದಾರೆ. ` ದೇಶವೆಂದರೆ ಪರ್ವತ, ಕಣಿವೆಗಳಲ್ಲ, ದೇಶವೆಂದರೆ ನದಿ ಸರೋವರಗಳಲ್ಲ. ದೇಶವೆಂದರೆ ಬೆಟ್ಟಗುಡ್ಡ ಮಣ್ಣಲ್ಲ. ಬದಲಿಗೆ ಅಲ್ಲಿ ವಾಸಿಸುವ ಜನ ಮತ್ತು ಆ ಜನರ ಕಷ್ಟ ಕಾರ್ಪಣ್ಯ’ ಎಂದು ನುಡಿದಿದ್ದಾರೆ.
ಒಂದು ದೇಶದ ಸಾಮಥ್ರ್ಯ, ಪ್ರಗತಿ, ಅಭಿವೃದ್ಧಿಯನ್ನು ಆ ದೇಶದ ಜನರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳ ಮೇಲೆ ಆಧರಿಸಿರುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸ್ಥಿತಿ ಹೇಗಿತ್ತು ? ಸ್ವಾತಂತ್ರ್ಯ ಬಂದು 78 ವರ್ಷಗಳಲ್ಲಿ ಭಾರತ ಹೇಗೆ ಬದಲಾಗಿದೆ ಇದಕ್ಕೆ ಕಾರಣರು ಯಾರು ? ಮತ್ತು ಯಾವುದರಿಂದ ? ಎಂಬ ಪ್ರಶ್ನೆ ಉತ್ತರ ಒಂದೇ `ಭಾರತದ ಸಂವಿಧಾನ’ ಮತ್ತು ಸಂವಿಧಾನ ಕರ್ತೃ ಡಾ.ಬಿ.ಆರ್. ಅಂಬೇಡ್ಕರ್. ಇದನ್ನು ಭಾವನಾತ್ಮಕವಾಗಿಯೋ, ಅಂದ ಅಭಿಮಾನದಿಂದಲೋ, ಉತ್ತ್ರೇಕ್ಷೆಯಿಂದಲೋ ಹೇಳುತ್ತಿಲ್ಲ. ಪ್ರಾಚೀನ ಭಾರತ, ಮಧ್ಯಕಾಲೀನ ಭಾರತ ಮತ್ತು ಆಧುನಿಕ ಭಾರತವನ್ನು ಅಧ್ಯಾಯನ ಮಾಡಿಯೆ ಈ ವಾದವನ್ನು ಬಲವಾಗಿ ಪ್ರತಿಪಾದಿಸಿದ್ದೇನೆ. ಇದಕ್ಕೆ ಉದಾಹರಣೆಗಳು…

ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತೆಯು ಶೇ.12ರಷ್ಟಿತ್ತು. ಮಾನ್ಯ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ಭಾರತದ ಸಾಕ್ಷರತೆ ಶೇ.74ರಷ್ಟು ಏರಿಕೆಯಾಗಿತ್ತು. 2025ರ ವೇಳೆಗೆ ಈ ಪ್ರಮಾಣ ಶೇ. 77ಕ್ಕೆ ಹೆಚ್ಚಳಗೊಂಡಿದೆ. 1947ರಲ್ಲಿ ಭಾರತದ ಬಡತನದ ರೇಖೆ ಶೇ.55ರಷ್ಟು ಇತ್ತು. ಈಗ ಶೇ. 20ಕ್ಕೆ ಇಳಿದಿದೆ. ಅಂದು 52 ಮಿಲಿಯನ್ ಟನ್ ಆಹಾರ ಉತ್ಪಾಧನೆ ಮಾಡುತ್ತಿದ್ದ ಭಾರತ ಈಗ 362 ಮಿಲಿಯನ್ ಟನ್ ಆಹಾರ ಉತ್ಪಾದನೆ ಮಾಡುತ್ತ ಹಸಿರು ಕ್ರಾಂತಿಯನ್ನು ಮಾಡಿದೆ. 1947ರಲ್ಲಿ ಭಾರತದಲ್ಲಿದ್ದ ಶಾಲೆಗಳು ಕೇವಲ 2 ಲಕ್ಷ ಮತ್ತು ವಿಶ್ವವಿದ್ಯಾನಿಲಯಗಳು ಕೇವಲ 11 ಇದ್ದವು, ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಹೊತ್ತಿಗೆ ಭಾರತದಲ್ಲಿ 13 ಲಕ್ಷ ಶಾಲೆಗಳು, 573 ಯೂನಿವರ್ಸಿಟಿಗಳು ಸ್ಥಾಪನೆಯಾಗಿದ್ದವು. 1947ರಲ್ಲಿ ನಮ್ಮ ದೇಶ ಕಗ್ಗತ್ತಲಿನ ಭಾರತವಾಗಿತ್ತು. ಇಡೀ ದೇಶದಲ್ಲಿ ಕೇವಲ 1362 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಿ ಕೇವಲ 3061 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವಿತ್ತು. 2011ರ ವೇಳೆಗೆ ನಮ್ಮ ದೇಶದಲ್ಲಿ 2.45 ಲಕ್ಷ ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗಿ 5 ಲಕ್ಷದ 72 ಸಾವಿರದ 414 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 1951ರಲ್ಲಿ ಭಾರತದಲ್ಲಿ ಕೇವಲ 4 ಲಕ್ಷ ಕಿ.ಮೀ ರಸ್ತೆ ನಿರ್ಮಾಣವಾಗಿತ್ತು. 2025ರ ವೇಳೆಗೆ 6.6 ಲಕ್ಷ ಕಿ.ಮೀ. ರಸ್ತೆ ನಿರ್ಮಾಣಗೊಂಡಿದೆ. ಅಷ್ಟೇಕೆ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರ ಜೀವಿತ ಅವಧಿ ಸರಾಸರಿ 30 ವರ್ಷ. ಆದರೆ ಈಗ ವಿಜ್ಞಾನ ತಂತ್ರಜ್ಞಾನ, ವೈದ್ಯಕೀಯ ಆವಿಷ್ಕಾರ, ಔಷಧಿ ಕ್ರಾಂತಿಯಿಂದಾಗಿ ಭಾರತೀಯರ ಜೀವಿತ ಅವಧಿ ಸರಾಸರಿ 70 ವರ್ಷಕ್ಕೆ ಏರಿಕೆಯಾಗಿದೆ. ಇದಕ್ಕೆಲ್ಲ ಕಾರಣ, ಸಂವಿಧಾನ ಮತ್ತು ಸಂವಿಧಾನದ ಮೂಲಕ ಆಯ್ಕೆಯಾಗಿ ಆಡಳಿತ ನಡೆಸಿದ ಸರಕಾರಗಳು ಮತ್ತು ನಾಯಕರ ಶ್ರಮ ಮತ್ತು ದೂರದೃಷ್ಠಿ.

ಸಾಮಾಜಿಕವಾಗಿ ಭಾರತದಂತಃ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಭಾರತದ ಬಹುಸಂಖ್ಯಾತ ಶೂದ್ರ-ಪಂಚಮರ ಸ್ಥಿತಿ ಹೇಗಿತ್ತು ? ಪ್ರಸ್ತುತ ಹೇಗಿದೆ. ಸೂರ್ಯನ ಬೆಳಕನ್ನೂ ಸ್ಪರ್ಶಿಸಲು ಅವಕಾಶವಿಲ್ಲದಾ, ನೆಲದ ಮೇಲೆ ನಡೆಯಲೂ ಅಧಿಕಾರವಿಲದಾ, ಪ್ರಾಣಿಗಳಿಗಿಂತ್ತಲೂ ಹೀನ ಬದುಕು ನಡೆಸಿದ ಜನಾಂಗ ಇಂದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕ್ಷೇತ್ರದಲ್ಲಿ ಅಗ್ರಮಾನ್ಯ ಸ್ಥಾನಮಾನಗಳನ್ನು ಅಲಂಕರಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದರೆ ಅದಕ್ಕೆ `ಭಾರತದ ಸಂವಿಧಾನ’ ಮಾತ್ರ ಕಾರಣ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಆಶಯಗಳನ್ನು ಹೊತ್ತು ಈ ವರ್ಗಗಳಿಗೆ ಕಾನೂನಿನ ರಕ್ಷಣೆ, ಮೀಸಲಾತಿಯ ಮೂಲಕ ಅವಕಾಶಗಳನ್ನು ದೊರಕಿಸಿ ಕೊಡದೆ ಹೋಗಿದ್ದರೆ 2047ಕ್ಕೆ ಇರಲಿ ಸಾವಿರ ವರ್ಷಗಳು ಕಳೆದರೂ ಭಾರತ ಎಂದಿಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿಲ್ಲ ಹಾಗೂ ಪ್ರಬುದ್ಧ ಭಾರತ ನಿರ್ಮಾಣ ಕನಸ್ಸು ನನಸ್ಸಾಗಲ್ಲ.
ಹಾಗಾದರೆ, ಭಾರತದ ಸಂವಿಧಾನ ಕೇವಲ ಶೋಷಿತ ಶೂದ್ರ ಅಸ್ಪøಶ್ಯ ಸಮಾಜಗಳ ಬದುಕನ್ನು ಕಟ್ಟಿಕೊಟ್ಟಿದೆಯೇ ? ಇಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾರತದ ಸಂವಿಧಾನದ ನೆರಳಿನಲ್ಲಿ ಬದುಕುತಿದ್ದಾನೆ. `ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’, ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ’ ಎಂದು ಹೇಳುತ್ತಲೇ ಶಿಕ್ಷಣ, ಪದವಿ, ಉದ್ಯೋಗ, ಅಧಿಕಾರ, ಆಸ್ತಿ, ಯಜಮಾನಿಕೆ ಹಕ್ಕುಗಳನ್ನು ಕಸಿದು ಗಂಡಸಿನ ದಾಸಿಯಾಗಿಸಿಕೊಂಡಿದ್ದ ಪುರುಷ ಪ್ರಧಾನ ಸಮಾಜದಲ್ಲಿ ಇಂದು ಮಹಿಳೆ ಎಲ್ಲ ರಂಗದಲ್ಲೂ ರಾರಾಜಿಸುತ್ತಿದ್ದಾಳೆ. ಶಿಕ್ಷಣ, ಪದವಿ, ಉದ್ಯೋಗ, ಅಧಿಕಾರ, ಅವಕಾಶ, ಗೌರವಗಳನ್ನು ಗಿಟ್ಟಿಸಿಕೊಂಡು ಪುರುಷರಿಗೆ ಸಮಾನವಾಗಿ ನಿಲ್ಲುವಂತ್ತಾಗಿದ್ದರೆ ಅದಕ್ಕೆ `ಭಾರತದ ಸಂವಿಧಾನ’ ಕಾರಣ. ಏಕೆಂದರೆ, ಈ ನೆಲದಲ್ಲಿ ಜೀವಿಸುವ ಸಕಲ ಜೀವರಾಶಿಗಳಿಗೆ ರಕ್ಷಣೆ ನೀಡುತ್ತಾ, ಪ್ರತಿಯೊಬ್ಬರ ಬದುಕಿಗೆ ಮಾರ್ಗದರ್ಶಿಯಾಗಿರುವ ಸಂವಿಧಾನವೇ ನಮಗೆ ನಿಜವಾದ ಧರ್ಮ ಗ್ರಂಥ.
ವಿಷಯಕ್ಕೆ ಬರೋಣ…ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಂಡ ಹಿನ್ನಲ್ಲೆಯಲ್ಲಿ ಭಗವಾಧ್ವಜವನ್ನು ಹಾರಿಸಿ ರಾಮ ರಾಜ್ಯದ ಕಲ್ಪನೆಯನ್ನು ದೇಶಕ್ಕೆ ಸಾರಲು ಸಂವಿಧಾನ ದಿನದ ಮುನ್ನಾ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದೂ ಆರ್‍ಎಸ್‍ಎಸ್‍ನ ಹಿಡನ್ ಅಜೆಂಡಾಗಳಲ್ಲಿ ಒಂದು. ಏಕೆಂದರೆ, ಆರ್‍ಎಸ್‍ಎಸ್ ಯಾವುದೇ ಮಹತ್ತರ ಅಥವಾ ದುಸ್ಥರ ಕಾರ್ಯಗಳಿಗೆ ದಿನಾಂಕ ನಿಗಧಿ ಪಡಿಸುವಾಗ ಸ್ಪಷ್ಟ ಉದ್ದೇಶಗಳನ್ನು ಹೊಂದಿರುತ್ತದೆ. ಉದಾಹರಣೆಗೆ ಇದೇ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಲು ಇವರು ನಿಗಧಿ ಪಡಿಸಿದ ದಿನಾಂಕ ಡಿಸೆಂಬರ್ 6. ಅಂದರೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ನಿಧನರಾದ ದಿನ. ಈಗ ಡಾ. ಅಂಬೇಡ್ಕರ್ ವಿರಚಿತ ಸಂವಿಧಾನ ಜಾರಿಗೆ ಬಂದ ದಿನದ ಮುನ್ನಾ ದಿನ `ರಾಮರಾಜ್ಯ’ದ ಕಲ್ಪನೆಯನ್ನು ಹುಟ್ಟುಹಾಕುವ ಪ್ರಯತ್ನ ಮಾಡಿದ್ದಾರಾ ? ಸಂವಿಧಾನದ ಧರ್ಮನಿರಪೇಕ್ಷತೆ, ಜಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕ ಆಶಯಗಳನ್ನು ಧಿಕ್ಕರಿಸುವ ಉದ್ದೇಶ ಇವರದ್ದಾ ? ಆಮೂಲಕ ಭಾರತದ ಸಂವಿಧಾನವನ್ನು ಒಪ್ಪೋದಿಲ್ಲ ಎಂಬ ಪರೋಕ್ಷ ಸಂದೇಶ ಸಾರುವ ಸಲುವಾಗಿ ಸಂವಿಧಾನ ದಿನದ ಮುನ್ನಾ ದಿನದಂದು ಈ ಕಾರ್ಯಕ್ರಮ ಆಯೋಜನೆ ಮಾಡಿ ರಾಜ ರಾಜ್ಯದ ಸಂದೇಶ ನೀಡಿದ್ದಾರೆಯೇ ? ಅದೇನೇ ಆಗಿರಲಿ, ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಭೀಮ ರಾಜ್ಯದಲ್ಲಿ ಬದುಕುತ್ತಿದ್ದಾನೆ ಎಂಬ ಸತ್ಯದ ಅರಿವು ಆಗಬೇಕಿದೆ. ಏಕೆಂದರೆ, ಸಾವಿರಾರು ವರ್ಷಗಳಿಂದ ಸಾಧಿಸಲಾಗದ್ದನ್ನು ಸಂವಿಧಾನ ಜಾರಿಗೆ ಬಂದ 75 ವರ್ಷಗಳಲ್ಲಿ ಭಾರತ ಸಾಧಿಸಿದೆ ಎಂಬುವುದಕ್ಕೆ ಈ ಮೇಲೆ ನೀಡಿದ ಅಂಕಿ ಅಂಶಗಳು ರುಜುವಾತು ಮಾಡುತ್ತಿವೆ ಎಂದು ಹೇಳುತ್ತಾ…ಕಾಲಮಾನಕ್ಕೆ ಅಲ್ಪ ವಿರಾಮ ಹಾಕುತ್ತೇನೆ.
ಜೈ ಸಂವಿಧಾನ !!!

Call Now Button